ಐದು ಗ್ಯಾರಂಟಿಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಸ್ಕೀಮ್ ಗಳಾಗಿವೆ. ಈ ಗ್ಯಾರಂಟಿ ಯೋಜನೆಗಳಿಂದಲೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು. ಐದು ವರ್ಷವೂ ಎಲ್ಲರಿಗೂ ಗ್ಯಾರಂಟಿ ನೀಡುವುದಾಗಿ ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಘೋಷಣೆ ಮಾಡಿತ್ತು. ಇದೀಗ ಗದ್ದಲ ಜೋರಾಗಿದ್ದು, ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ಮತ್ತೆ ವಿವಾದದವನ್ನ ಸೃಷ್ಟಿಸಿದೆ. ಅಷ್ಟಕ್ಕೂ ರಾಯರೆಡ್ಡಿ ಹೇಳಿದ್ದೇನು?
ಪಂಚ ಗ್ಯಾರಂಟಿಗಳನ್ನ ಐದು ವರ್ಷವೂ ನೀಡುತ್ತೇವೆ ಎನ್ನುವ ವಾಗ್ದಾನದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೀಗ ಅದೇ ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ವಿಚಾರ ಸಚಿವರು, ಶಾಸಕರ ನೀಡುತ್ತಿರುವ ಹೇಳಿಕೆಗಳು ಗೊಂದಲವನ್ನ ಸೃಷ್ಟಿಸುತ್ತಿವೆ. ಫಲಾನುಭವಿಗಳಿಗೂ ಈ ರೀತಿಯ ಹೇಳಿಕೆಯಿಂದ ಆತಂಕ ಹೆಚ್ಚಾಗಿದೆ. ಅನರ್ಹರಿಗೆ ಕಡಿವಾಣ ಹಾಕಿ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ ಎಂಬ ಶಾಸಕರು, ಸಚಿವರ ಗೊಂದಲದ ಹೇಳಿಕೆಗಳು ಇದೇ ಹೊಸದೇನಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basvaraj Rayareddi) ಅವರೇ ಈ ರೀತಿಯ ಸ್ಪೋಟಕ ಹೇಳಿಕೆಯನ್ನ ನೀಡಿದ್ದಾರೆ.
ಮಂಗಳವಾರ ಯಲಬುರ್ಗಾ ತಾಲೂಕಿನ ಕುಕನೂರು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಗ್ಯಾರಂಟಿಗಳಲ್ಲಿ ಅನರ್ಹ ಫಲಾನುಭವಿಗಳಿಗೂ ಯೋಜನೆಯ ಲಾಭ ಹೋಗುತ್ತಿದೆ. ಈ ಕುರಿತು ರಾಜ್ಯಾದ್ಯಂತ ತನಿಖೆ ಮಾಡಿಸಿ ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಲಾಭ ತಲುಪದಂತೆ ಕಡಿವಾಣ ಹಾಕಲಾಗುವುದು ಎಂದಿದ್ದಾರೆ. ಇದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷಗಳಿಗೆ ಅಸ್ತ್ರವಾಗಿದೆ.
ಒಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಷಕ್ಕೆ ಗ್ಯಾರಂಟಿ ಯೋಜನೆಯಡಿ ಅಂದಾಜು 250 ಕೋಟಿ ಹಣ ನೀಡುತ್ತಿದ್ದು, ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ. ಆದರೆ ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕಬೇಕು ಎನ್ನುವ ವಿಚಾರ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.
ಅರ್ಹರಿಗೆ ಮಾತ್ರ ಗ್ಯಾರಂಟಿ ಯೋಜನೆ ನೀಡುವುದಾಗಿ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ, ಕಾಂಗ್ರೆಸ್ ಪಕ್ಷ ಪ್ರತಿಪಕ್ಷವಾಗಿದ್ದಾಗ ಕಾಲು ಹಿಡಿದು ಅಧಿಕಾರ ಕೇಳಿದರು. ಪೆನ್ನು ಕೊಡಿ, ಪೇಪರ್ ಕೊಡಿ ಅಂತ ಕಾಲಿಗೆ ಬಿದ್ದರು. ಜನ ಫ್ರೀ ಕೊಡಿ ಅಂತ ಕೇಳಿರಲಿಲ್ಲ. ಗ್ಯಾರಂಟಿ ಕೊಡುತ್ತೇವೆ ಎಂದು ಮತ ಪಡೆದರು. ಜನರ ಕಾಲು ಹಿಡಿದರು. ಈಗ ಗ್ಯಾರಂಟಿ ವಾಪಸ್ ಪಡೆಯಬೇಕಾ? ಕೂಡಲೇ ರಾಜೀನಾಮೆ ಕೊಟ್ಟು ವಾಪಸ್ ಬನ್ನಿ. ಇನ್ನೂ ಹೆಚ್ಚಾಗಿ ಗ್ಯಾರಂಟಿ ಕೊಡಿ ನಾವು ಬೇಡ ಅನ್ನಲ್ಲ. ಆದರೆ ಕೊಟ್ಟ ಮಾತಿಗೆ ತಪ್ಪಬೇಡಿ.ಮಾತಿಗೆ ತಪ್ಪುವುದಾದರೆ ಸರ್ಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನು ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿ, ಐದು ಗ್ಯಾರಂಟಿಗಳು ಗ್ಯಾರಂಟಿ ಕಳೆದುಕೊಳ್ಳುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ. ಎಲ್ಲರಿಗೂ ಫ್ರೀ ಎಂದಯ ಹೇಳಿ ಈಗ ಬಿಪಿಎಲ್ ನವರಿಗೆ ಮಾತ್ರ ಅಂತಾ ಹೇಳಿದರು. ಈಗ ಅರ್ಹರನ್ನು ಹುಡುಕಿ ಕಾಂಗ್ರೆಸ್ ಮತದಾರರಿಗೆ ಮಾತ್ರ ಕೊಡುತ್ತಾರೆ. ಗ್ಯಾರಂಟಿ ಕೊಡಲು ಅವರಿಗೆ ಆಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾರಂಟಿ ಗದ್ದಲ ಜೋರಾಗಿದೆ. ಶಾಸಕರು, ಸಚಿವರ ಗೊಂದಲದ ಹೇಳಿಕೆಗಳು ಸಾಮಾನ್ಯರಿಗೆ ಆಂತಕ ಸೃಷ್ಟಿಸಿದ್ರೆ, ವಿಪಕ್ಷ ನಾಯಕರಿಗೆ ಅಸ್ತ್ರವಾಗಿದೆ. ಸದ್ಯ ಜುಲೈ ತಿಂಗಳಿನಿಂದ ಅರ್ಹರಿಗೆ ಮಾತ್ರ ಗ್ಯಾರೆಂಟಿ ತಲುಪಲಿದ್ಯಾ ಅಥವಾ ಪರಿಷ್ಕರಣೆ ಆಗುತ್ತಾ ಎಂದು ಕಾದು ನೋಡಬೇಕಿದೆ.