ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಉಚ್ಛಾಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಅವರಿಬ್ಬರೂ ಯಾರನ್ನು ರೇಪ್ ಮಾಡಿಲ್ವಲ್ಲ. ಎಸ್.ಟಿ.ಸೋಮಶೇಖರ್ ಹಾಗೂ ಹೆಬ್ಬಾರ್ ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ವಲ್ಲ, ಯಾರಿಗಾದ್ರೂ ಏಡ್ಸ್ ಇಂಜಿಂಕ್ಷನ್ ಚುಚ್ಚಿದ್ರಾ? ಎಂದು ಕಿಡಿಕಾರಿದರು.
‘ಮುತ್ತು ರತ್ನಗಳನ್ನೆಲ್ಲಾ ನೀವೇ ಇಟ್ಟುಕೊಳ್ಳಿ’
ಇದೇ ವೇಳೆ ಮುತ್ತು ರತ್ನಗಳನ್ನೆಲ್ಲಾ ಅವರೇ ಮಡಗಿಕೊಳ್ಳಲಿ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಉಚ್ಚಾಟಿತರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಪರ ಮಾತಾಡಿದ್ದೂ ಅಲ್ಲದೇ, ಅತ್ಯಾಚಾರದ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನಗೆ ಕುಟುಕಿದ್ದಾರೆ.
6 ವರ್ಷಗಳ ಕಾಲ ಉಚ್ಛಾಟನೆ
ಈ ಹಿಂದೆ ಪಕ್ಷ ವಿರೋದಿ ಚಟುವಟಿಕೆ ಹಿನ್ನಲೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ಬಿಜೆಪಿ ಶಿಸ್ತು ಸಮಿತಿ ವರದಿ ನೀಡಿತ್ತು. ಅದರಂತೆ ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಭಾರತೀಯ ಜನತಾ ಪಕ್ಷದಲ್ಲಿ ಮತ್ತೆರಡು ತಲೆದಂಡವಾಗಿದ್ದು, ಶಾಸಕ ST ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.
ಈ ಹಿಂದೆ ಇದೇ ಪಕ್ಷ ವಿರೋಧಿ ಆರೋಪದ ಮೇರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನೂ ಉಚ್ಛಾಟನೆ ಮಾಡಲಾಗಿತ್ತು. ಯತ್ನಳಾ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದರು.
ವಿಜಯೇಂದ್ರ ತಿರುಗೇಟು
ಇನ್ನು ಬಿಜೆಪಿ ಶಾಸಕರ ಉಚ್ಛಾಟನೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆಗೆ ವಿಜಯೇಂದ್ರ ತಿರುಗೇಟು ನೀಡಿದ್ದು, ‘ನಮ್ಮ ಪಕ್ಷದ ತೀರ್ಮಾನಕ್ಕೆ ಡಿಕೆ ಶಿವಕುಮಾರ್ ಅವರು ನೋವು ಪಡುವ ಅಗತ್ಯವಿಲ್ಲ. ಪಕ್ಷ ವಿರೋಧಿ ಕೆಲಸ ಮಾಡಿದ್ದು ಅವರಿಗೂ ಗೊತ್ತು. ಕೇಂದ್ರದ ನಾಯಕರಿಗೂ ಗೊತ್ತು. ಪಕ್ಷದಲ್ಲಿ ಅಧಿಕಾರ ಅನುಭವಿಸಿದ್ರು. ವಿಪಕ್ಷದಲ್ಲಿ ಕೂರಲು ಕಷ್ಟ ಆಯ್ತು ಅನ್ಸತ್ತೆ. ಕೇಂದ್ರ ಶಿಸ್ತು ಸಮಿತಿ ನಿರ್ಧಾರ ಸ್ವಾಗತಿಸುತ್ತೇನೆ ಎಂದರು.
ಇದೇ ವೇಳೆ ಪಕ್ಷ ವಿರೋಧಿ ಕೆಲಸ ಮಾಡಿದ್ರು, ಹೀಗಾಗಿ ಕೇಂದ್ರಕ್ಕೆ ಮನವಿ ಮಾಡುವ ಮೂಲಕ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದೆವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ. ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಇಬ್ಬರನ್ನ ಕೂಡ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅವರಿಬ್ಬರೂ ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿರ್ಲಿಲ್ಲಾ.. ಏಡ್ಸ್ ಇಂಜೆಕ್ಷನ್ ಚುಚ್ಚಿರ್ಲಿಲ್ಲ.. ಮುತ್ತು’ರತ್ನ’ ಅವರೇ ಇಟ್ಟುಕೊಳ್ಳಲಿ ಎಂದ ಡಿಸಿಎಂ ಡಿಕೆಶಿ
WhatsApp Group
Join Now