ಸ್ಕೂಟಿಯಲ್ಲಿ ಹೋಗುವಾಗ ಕುತ್ತಿಗೆಗೆ ಬಿಗಿದ ಗಾಳಿಪಟದ ಮಾಂಜಾ ದಾರ, ಮಹಿಳೆ ದಾರುಣ ಸಾ*ವು

Spread the love

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಳಿಪಟ ಹಾರಿಸಲು ಬಳಸುವ ಮಾರಕ ‘ಮಾಂಜಾ ದಾರ’ಕ್ಕೆ ಮತ್ತೊಂದು ಬಲಿಯಾಗಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ಅತಿಯಾದ ರಕ್ತಸ್ರಾವದಿಂದ ದಾರುಣವಾಗಿ ಮೃತಪಟ್ಟ ಘಟನೆ ನಗರದ ಶಿವಶಂಕರ ಕಾಲೋನಿ ಬಳಿ ನಡೆದಿದೆ.

ಹುಬ್ಬಳ್ಳಿಯ ಭರತ್ ನಗರದ ನಿವಾಸಿ, ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾ ಮಂಜುನಾಥ ಗೌಡರ (38) ಮೃತಪಟ್ಟ ದುರ್ದೈವಿ ಮಹಿಳೆಯಾಗಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ವಿದ್ಯಾ ಅವರು ತಮ್ಮ ಮನೆಯಿಂದ ಕೆಲಸ ಮಾಡುವ ಲ್ಯಾಬ್‌ಗೆ ಸ್ಕೂಟಿ ಮೇಲೆ ಹೊರಟಿದ್ದರು. ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿ ಬಳಿ ಸಾಗುತ್ತಿದ್ದಾಗ, ಗಾಳಿಪಟ ಹಾರಿಸಲು ಬಳಸಲಾಗುವ ಹರಿತವಾದ ಮಾಂಜಾ ದಾರ ದಿಢೀರನೆ ಅವರ ಕುತ್ತಿಗೆಗೆ ಬಿಗಿಯಾಗಿ ಸಿಲುಕಿದೆ.

ದಾರ ಕುತ್ತಿಗೆಯನ್ನು ಸೀಳಿದ್ದರಿಂದ ತೀವ್ರ ನೋವಿನಿಂದ ವಿದ್ಯಾ ಅವರು ಸ್ಕೂಟಿಯಿಂದ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಅತಿಯಾದ ರಕ್ತಸ್ರಾವ ಉಂಟಾಗಿದ್ದು, ಸ್ಥಳೀಯರು ಹಾಗೂ ಹತ್ತಿರದಲ್ಲಿದ್ದವರು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಆಸ್ಪತ್ರೆಗೆ ತಲುಪಿಸುವಷ್ಟರಲ್ಲೇ ವಿದ್ಯಾ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಿಮ್ಸ್ ಶವಾಗಾರಕ್ಕೆ ಪೊಲೀಸ್ ಆಯುಕ್ತರ ಭೇಟಿ

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಜಿ. ಬೋರಸೆ ಅವರು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು. ಮೃತ ಮಹಿಳೆಯ ದೇಹವನ್ನು ಪರಿಶೀಲಿಸಿದ ಅವರು, ಕಣ್ಣೀರಿಡುತ್ತಿದ್ದ ಕುಟುಂಬಸ್ಥರಿಂದ ಘಟನೆಯ ವಿವರ ಪಡೆದು ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಮಾಂಜಾ ದಾರ ಬಳಸುವವರ ಮತ್ತು ಮಾರಾಟ ಮಾಡುವವರ ವಿರುದ್ಧ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ.

“ಯಾರು ಈ ಅಪಾಯಕಾರಿ ಮಾಂಜಾ ದಾರವನ್ನು ಬಳಕೆ ಮಾಡುತ್ತಿದ್ದಾರೋ ಅವರನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸುತ್ತೇವೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಗಾಳಿಪಟ ಹಾರಿಸಲು ಮಾಂಜಾ ದಾರವನ್ನು ಬಳಸಬಾರದು. ಒಂದು ವೇಳೆ ಬಳಸಿದ್ದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಅಷ್ಟೇ ಅಲ್ಲದೆ, ಇಂತಹ ಅಪಾಯಕಾರಿ ದಾರಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವ ಅಂಗಡಿಯವರು ಹಾಗೂ ವ್ಯಕ್ತಿಗಳ ಮೇಲೆಯೂ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಾಗುವುದು” ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now

Spread the love

Leave a Reply