ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿಯ ನಡುವಿನ ವ್ಯತ್ಯಾಸದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಾತನಿಂದ ತಂದೆಗೆ ಬಂದ ಎಲ್ಲ ಆಸ್ತಿಗಳೂ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ನೀಡುವ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಸ್ತಿಯ ಮೂಲ, ಅದು ಯಾವ ರೀತಿಯಲ್ಲಿ ಸಂಪಾದಿಸಲಾಗಿದೆ ಹಾಗೂ ಅದರ ಕಾನೂನು ಸ್ವರೂಪ ಏನು ಎಂಬುದನ್ನು ಆಧರಿಸಿ ಅದು ಪಿತ್ರಾರ್ಜಿತ ಆಸ್ತಿಯೇ ಅಥವಾ ಸ್ವಯಾರ್ಜಿತ ಆಸ್ತಿಯೇ ಎಂಬುದನ್ನು ನಿರ್ಧರಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಪ್ರಕಾರ, ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗಿ ತಲೆಮಾರುಗಳಿಂದ ಮುಂದುವರಿದಿರುವ ಹಾಗೂ ಜಂಟಿ ಸ್ವರೂಪವನ್ನು ಉಳಿಸಿಕೊಂಡಿರುವ ಆಸ್ತಿಯನ್ನು ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಆಸ್ತಿಯಲ್ಲಿ ಮಕ್ಕಳಿಗೆ ಹುಟ್ಟಿನಿಂದಲೇ ಹಕ್ಕು ಇರುತ್ತದೆ.
ಆದರೆ, ತಾತ ತಮ್ಮ ಸ್ವಂತ ಆದಾಯ, ದುಡಿಮೆ ಅಥವಾ ಖರೀದಿಯಿಂದ ಸಂಪಾದಿಸಿದ ಸ್ವಯಾರ್ಜಿತ ಆಸ್ತಿಯನ್ನು ನಂತರ ತಂದೆಗೆ ನೀಡಿದ್ದರೂ, ಅದು ಸ್ವಯಂಚಾಲಿತವಾಗಿ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಸ್ವಂತ ಆದಾಯ, ಖರೀದಿ, ಉಡುಗೊರೆ, ಉಯಿಲು (Will) ಅಥವಾ ವೈಯಕ್ತಿಕ ಪ್ರಯತ್ನದ ಮೂಲಕ ಪಡೆದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಇಂತಹ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಆಸ್ತಿಯ ಮಾಲೀಕರಿಗೇ ಇರುತ್ತದೆ. ಅದನ್ನು ಯಾರಿಗೆ ವರ್ಗಾಯಿಸಬೇಕು ಅಥವಾ ಉಯಿಲು ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವೂ ಅವರಿಗೆ ಇರುತ್ತದೆ.
ಆದರೆ, ಸ್ವಯಾರ್ಜಿತ ಆಸ್ತಿಯನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಹಿಂದೂ ಅವಿಭಕ್ತ ಕುಟುಂಬದ ಸಾಮೂಹಿಕ ಆಸ್ತಿಯಾಗಿ ಸೇರಿಸಿದರೆ ಅಥವಾ ಅದು ಕುಟುಂಬದ ಆಸ್ತಿಯ ಸ್ವರೂಪ ಪಡೆದುಕೊಂಡರೆ ಮಾತ್ರ ಅದರ ಕಾನೂನು ಸ್ವರೂಪ ಬದಲಾಗಬಹುದು. ಕೇವಲ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿದೆ ಎಂಬ ಕಾರಣಕ್ಕೆ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳ ಹಕ್ಕು
ತಂದೆ ಜೀವಂತವಾಗಿರುವವರೆಗೆ ಅವರ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ. ಆದರೆ ತಂದೆ ಉಯಿಲು ಮಾಡದೆ ಮೃತಪಟ್ಟರೆ, ಕಾನೂನುಬದ್ಧ ಉತ್ತರಾಧಿಕಾರಿಗಳಾಗಿ ಮಕ್ಕಳು ಆಸ್ತಿಯಲ್ಲಿ ಪಾಲು ಪಡೆಯಬಹುದು. ಅಥವಾ ತಂದೆ ಉಯಿಲಿನ ಮೂಲಕ ಪಾಲು ನೀಡಿದ್ದರೆ ಅದರಂತೆ ಹಕ್ಕು ದೊರೆಯುತ್ತದೆ.
2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನ ಹಕ್ಕು ಇದೆ. ಆದರೆ ಈ ಕಾಯ್ದೆಯು ಸ್ವಯಾರ್ಜಿತ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯನ್ನಾಗಿ ಪರಿವರ್ತಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉಷಾ ಎನ್. ಸ್ವಾಮಿ ಎಂಬವರು ತಮ್ಮ ತಾತನ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ತಾತನ ನಿಧನದ ನಂತರ ಆಸ್ತಿ ತಂದೆಗೆ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗಿದ್ದು, ತಮಗೂ ಜನ್ಮಸಿದ್ಧ ಹಕ್ಕಿದೆ ಎಂದು ಅವರು ವಾದಿಸಿದ್ದರು.
ಆದರೆ, ಆಸ್ತಿ ಮೂಲತಃ ತಾತನ ಸ್ವಯಾರ್ಜಿತ ಆಸ್ತಿಯಾಗಿದ್ದು, ನಂತರ ಅದು ತಂದೆಗೆ ಪ್ರತ್ಯೇಕ ಆಸ್ತಿಯಾಗಿ ಬಂದಿರುವುದರಿಂದ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲವೂ ಪಿತ್ರಾರ್ಜಿತವಲ್ಲ; ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ ಎಂದ ಹೈಕೋರ್ಟ್
WhatsApp Group
Join Now