ದೀದಿ ಮಾತ್ರ ನಿಮ್ಮನ್ನು ರಕ್ಷಿಸಲು ಸಾಧ್ಯ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

Spread the love

‘ಬಿಜೆಪಿ ಮತ್ತು ಚುನಾವಣಾ ಆಯೋಗದ ಪಿತೂರಿಯಿಂದ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಹೆಸರಿನಲ್ಲಿ 90 ಲಕ್ಷ ಮತದಾರರನ್ನು ಕೈಬಿಡಲಾಯಿತು’ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ.

ಇಲ್ಲಿನ ರಾಸ್ ಬಿಹಾರಿ ಕ್ಷೇತ್ರದಲ್ಲಿ ಟಿಎಂಸಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಪೌರತ್ವ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿ ಬಯಸುತ್ತಿದೆ ಎಂದು ಹೇಳಿದ್ದಾರೆ.

‘ನಿಮ್ಮ ಪೌರತ್ವ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಿರುವ ಬಿಜೆಪಿಯ ವಿರುದ್ಧದ ಈ ಹೋರಾಟದಲ್ಲಿ ದೀದಿ(ಮಮತಾ ಬ್ಯಾನರ್ಜಿ) ಗೆಲ್ಲಲೇಬೇಕು. ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ಈ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ತಿಳಿಸಿ’ ಎಂದು ಅವರು ಹೇಳಿದ್ದಾರೆ.

‘ಈ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಮಾತ್ರ ನಿಮಗೆ ಸಹಾಯ ಮಾಡಲು ಸಾಧ್ಯ ಎಂಬುದನ್ನು ನೆನಪಿನಲ್ಲಿಡಿ. ಅವರು ನಿಮ್ಮ ಪರವಾಗಿ ನಿಲ್ಲುತ್ತಾರೆ’ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಬಾಲಿಗಂಜ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಎಸ್‌ಐಆರ್ ಅಡಿಯಲ್ಲಿ 27 ಲಕ್ಷ ಹೆಸರುಗಳನ್ನು ತಾರ್ಕಿಕ ವ್ಯತ್ಯಾಸದಡಿ ಗುರುತಿಸಲಾಗಿದೆ. ಇದರಿಂದಾಗಿ ಒಟ್ಟು ಕೈಬಿಡಲಾದ ಹೆಸರುಗಳ ಸಂಖ್ಯೆ 90 ಲಕ್ಷಕ್ಕೇರಿದೆ. ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಗೆದ್ದೆರೆ ಮಾತ್ರ ಈ 90 ಲಕ್ಷ ಜನರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಸಾಧ್ಯವಾಗುತ್ತದೆ’  ಅಭಿಪ್ರಾಯಪಟ್ಟಿದ್ದಾರೆ.

ಬಂಗಾಳದ ಜನರು ಭಯೋತ್ಪಾದಕರೆ?’

‘ವಿಧಾನಸಭಾ ಚುನಾವಣೆಗಾಗಿ 3.5 ಲಕ್ಷ ಭದ್ರತಾ ಸಿಬ್ಬಂದಿಯನ್ನು ಮೋದಿ ಸರ್ಕಾರ ನಿಯೋಜಿಸಿದೆ. ಇಲ್ಲಿ ಏನು ನಡೆಯುತ್ತಿದೆ? ಬಂಗಾಳದ ಜನರು ಭಯೋತ್ಪಾದಕರೆ?’ ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ, 6 ತಿಂಗಳು ಜೈಲಿಗೆ ಹಾಕಿದರು. ಆದರೆ, ಇದಕ್ಕೆ ಯಾವುದೇ ಪುರಾಗಳಿಲ್ಲ ಎಂದು ನ್ಯಾಯಾಲಯವೇ ಹೇಳಿತು. ದ್ವೇಷ ರಾಜಕಾರಣದಲ್ಲಿ ನಂಬಿಕೆಯಿಟ್ಟುರುವ ಪಕ್ಷಕ್ಕೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರಲು ದಯವಿಟ್ಟು ಅವಕಾಶ ನೀಡಬೇಡಿ’ ಎಂದು ಮನವಿ ಮಾಡಿದ್ದಾರೆ.

ಮುಂದುವರಿದು, ‘ಬಿಜೆಪಿ ಅಧಿಕಾರಕ್ಕೆ ಬಂದರೆ ದೀದಿ ಮಾಡಿದ ಕೆಲಸಗಳೂ ರದ್ದಾಗುತ್ತವೆ ಎಂಬುದನ್ನು ನೆನಪಿಡಿ. ವಿಧಾನಸಭಾ ಚುನಾವಣೆಗೆ ಮುನ್ನ ದೆಹಲಿಯ ಪ್ರತಿಯೊಬ್ಬ ಮಹಿಳೆಗೆ ₹2,500 ನೀಡುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ, ಅದನ್ನು ಈಡೇರಿಸಲಿಲ್ಲ’ ಎಂದು ಅವರು ಹೇಳಿದ್ದಾರೆ.

ಮಹಾಭಾರತಕ್ಕೆ ಹೋಲಿಕೆ:

ಪಶ್ಚಿಮ ಬಂಗಾಳದ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸಿದ ಕೇಜ್ರಿವಾಲ್‌, ‘ಕರ್ಣ ಮತ್ತು ಪಾಂಡವರ ನಡುವೆ ಹೋರಾಟ ನಡೆದಾಗ, ಕರ್ಣನ ಬಳಿ ಎಲ್ಲಾ ಸಂಪನ್ಮೂಲಗಳಿದ್ದವು. ಆದರೆ, ಪಾಂಡವರ ಪರವಾಗಿ ಕೃಷ್ಣನಿದ್ದನು. ಕೊನೆಯಲ್ಲಿ ಪಾಂಡವರೇ ಗೆದ್ದರು’ ಎಂದು ಹೇಳಿದ್ದಾರೆ.

‘ಬಂಗಾಳದ ಗೌರವವನ್ನು ಉಳಿಸುವ ಈ ಹೋರಾಟದಲ್ಲಿ ಕಾಳಿ ಮತ್ತು ದುರ್ಗಾ ಮಾತೆ ಮಮತಾ ಅವರೊಂದಿಗೆ ಇದ್ದಾರೆ ಎಂಬುದನ್ನು ನೆನಪಿಡಿ’ ಎಂದು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಮತ ಹಾಕದಂತೆ ಕೇಜ್ರಿವಾಲ್ ಮತದಾರರಲ್ಲಿ ಮನವಿ ಮಾಡಿದ್ದಾರೆ. ಅವರು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತಾರೆ ಎಂದು ಆರೋಪಿಸಿದ್ದಾರೆ.

WhatsApp Group Join Now

Spread the love

Leave a Reply