ಸ್ಪಷ್ಟವಾಗಿ ಹೇಳ್ತೀನಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬರಲ್ಲ; ಕೇಸ್ ಹಾಕುವ ಬೆದರಿಕೆಗೆ ಅಮಿತ್ ಶಾ ಕೌಂಟರ್

Spread the love

ಟಿಎಂಸಿ ಕಾರ್ಯಕರ್ತರಿಗೆ ಬೆದರಿಕೆ ಆರೋಪ ಸಂಬಂಧ ಪ್ರಕರಣ ದಾಖಲಿಸುವುದಾಗಿ ಹೇಳಿರುವ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕೌಂಟರ್ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಸ್ಪಷ್ಟವಾಗಿ ಹೇಳ್ತೀನಿ ಬಂಗಾಳದಲ್ಲಿ ಮತ್ತೆ ಮಮತಾ ಜೀ ಸರ್ಕಾರ ಬರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಎರಡನೇ ಹಂತದ ಚುನಾವಣೆ ಪ್ರಚಾರದ ಭಾಗವಾಗಿ ಟಾಲಿಗಂಜ್‌ನಲ್ಲಿ ನಡೆದ ರೋಡ್‌ಶೋ ವೇಳೆ ಎಎನ್ಐ ಜೊತೆ ಮಾತನಾಡಿರುವ ಅವರು, ಮಮತಾ ಬ್ಯಾನರ್ಜಿ ಏನು ಹೇಳಲು ಬಯಸುತ್ತಾರೆ? ಗೂಂಡಾಗಳನ್ನು ಗೌರವಿಸಬೇಕೇ? ಸಾರ್ವಜನಿಕರಿಗೆ ತೊಂದರೆ ನೀಡುವವರನ್ನು ಅವರು ಗೌರವಿಸಬಹುದು, ನಾವಲ್ಲ. ಅವರ ಹೇಳಿಕೆ ಸ್ವೀಕಾರ್ಹವಲ್ಲ, ಅವರು ಕೋರ್ಟ್ನಲ್ಲೂ ಸೋಲುತ್ತಾರೆ ಎಂದು ಕಿಡಿಕಾರಿದ್ದಾರೆ.

ಪ್ರತಿಯೊಂದು ಪಕ್ಷವೂ ತನ್ನದೇ ಆದ ಮಾತನ್ನು ಹೇಳುತ್ತದೆ, ರಾಹುಲ್ ಗಾಂಧಿ ಕೂಡ ಅದನ್ನೇ ಮಾಡುತ್ತಿದ್ದಾರೆ, ಆದರೆ ಈ ಬಾರಿ ಮಮತಾ ಬ್ಯಾನರ್ಜಿ ಸರ್ಕಾರ ಮರಳಿ ಬರಲ್ಲ. ಇದನ್ನು ನಾನು ಸ್ಪಷ್ಟವಾಗಿ ಹೇಳ್ತೇನೆ. ನಾವು ಸಾರ್ವಜನಿಕರ ನಡುವೆ ಇದ್ದೇವೆ ಎಂದು ಹೇಳಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇನು?

ಶನಿವಾರ(ಏ. 25) ಹೂಗ್ಲಿಯಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿರುವ ಬ್ಯಾನರ್ಜಿ, ಅಮಿತ್ ಶಾ ಅವರ ಹಿಂಸಾತ್ಮಕ ಹೇಳಿಕೆಗಳಿಗಾಗಿ ನಾವು ಕಾನೂನು ಮೊಕದ್ದಮೆ ಹೂಡಲಿದ್ದೇವೆ. ಗೃಹ ಸಚಿವರಾಗಿ ಅವರು ಅಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಗೃಹ ಸಚಿವರು ಯಾವ ರೀತಿಯ ಭಾಷೆಯನ್ನು ಬಳಸುತ್ತಿದ್ದಾರೆ? ಚುನಾವಣೆಯ ನಂತರ ಜನರನ್ನು ತಲೆಕೆಳಗಾಗಿ ನೇತು ಹಾಕುತ್ತೀರಿ ಎಂದು ಹೇಳುವುದು ಸ್ವೀಕಾರಾರ್ಹವಲ್ಲ. ಈ ಮನಸ್ಥಿತಿಯಿಂದ ನೀವು ಎಂದಿಗೂ ಬಂಗಾಳವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

WhatsApp Group Join Now

ಅಮಿತ್ ಶಾ ಹೇಳಿದ್ದೇನು?

ಶುಕ್ರವಾರ(ಏ. 24) ಉತ್ತರಪಾರ ಮತ್ತು ಹಿಂಗಲ್‌ಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದ ಶಾ, ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ದಿನವಾದ ಏಪ್ರಿಲ್ 29ರಂದು ಗೂಂಡಾಗಳು ತಮ್ಮ ಮನೆಗಳಿಂದ ಹೊರಬರದಂತೆ ಎಚ್ಚರಿಕೆ ನೀಡಿದ್ದರು.

ಈ ಹಿಂದಿನ ಚುನಾವಣೆಗಳಲ್ಲಿ ದೀದಿಯ ಗೂಂಡಾಗಳು ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿಯ ಮೊದಲ ಹಂತದ ಮತದಾನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಈ ಹಂತದಲ್ಲಿ ಬಿಜೆಪಿ 152 ಸ್ಥಾನಗಳಲ್ಲಿ 110 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದರು. ಮುಂದುವರೆದು, ಏಪ್ರಿಲ್ 29 ರಂದು ಗೂಂಡಾಗಳು ತಮ್ಮ ಮನೆಗಳಿಂದ ಹೊರಬರದಂತೆ ನಾನು ಎಚ್ಚರಿಕೆ ನೀಡಲು ಬಯಸುತ್ತೇನೆ; ಅವರು ಹಾಗೆ ಮಾಡಿದರೆ, ಮೇ 5 ರ ನಂತರ ಅವರನ್ನು ತಲೆಕೆಳಗಾಗಿ ನೇತುಹಾಕುವ ಮೂಲಕ ನಾವು ಅವರನ್ನು ಶಿಕ್ಷಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.


Spread the love

Leave a Reply