ಹಿಂದೂ ವಿವಾಹ ಕಾಯ್ದೆಯಡಿ ಅಗತ್ಯವಿರುವ ಧಾರ್ಮಿಕ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಪೂರೈಸದೆ, ಕೇವಲ ಮದುವೆ ನೋಂದಣಿ (Marriage Registration) ಮಾಡಿಸಿದ್ದರೆ ಅಂತಹ ಮದುವೆಯನ್ನು ಕಾನೂನುಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಾಕ್ಷ್ಯಗಳು ಮತ್ತು ಧಾರ್ಮಿಕ ಚೌಕಟ್ಟನ್ನು ಪರಿಶೀಲಿಸಿದ ನ್ಯಾಯಾಲಯವು, ಯಾವುದೇ ಪವಿತ್ರ ವಿಧಿವಿಧಾನಗಳು ನಡೆಯದೆ ನೋಂದಾಯಿಸಲ್ಪಟ್ಟಿದ್ದ ವಿವಾಹವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ‘ಶೂನ್ಯ’ (Null and Void) ಎಂದು ಘೋಷಿಸಿದೆ.
ಪ್ರಕರಣದ ಹಿನ್ನೆಲೆ
ಯುವಕನೊಬ್ಬ ತಾನು ಯುವತಿಯ ತಂದೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ತನ್ನ ಅರಿವಿಗೆ ಬಾರದಂತೆ ಮತ್ತು ಒಪ್ಪಿಗೆಯಿಲ್ಲದೆ ಕೆಲವು ಮದುವೆ ದಾಖಲೆಗಳಿಗೆ ಸಹಿ ಪಡೆದುಕೊಳ್ಳಲಾಗಿತ್ತು ಎಂದು ಕೋರ್ಟ್ ಮೆಟ್ಟಿಲೇರಿದ್ದ. ತಾನು ಪ್ರಸ್ತುತ ಯುನೈಟೆಡ್ ಕಿಂಗ್ಡಮ್ನಲ್ಲಿ (UK) ವಾಸಿಸುತ್ತಿದ್ದು, ಯಾವುದೇ ವಿವಾಹ ಸಮಾರಂಭದಲ್ಲಿ ಭಾಗವಹಿಸಿಲ್ಲ ಮತ್ತು ಯುವತಿಯೊಂದಿಗೆ ಪತಿ-ಪತ್ನಿಯಾಗಿ ಬಾಳಿಲ್ಲ ಎಂದು ಹೇಳಿದ್ದ. ಆರಂಭದಲ್ಲಿ ಕುಟುಂಬ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಯುವಕ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದ.
ಶಾಸ್ತ್ರೋಕ್ತ ವಿಧಿವಿಧಾನಗಳೇ ಪ್ರಮುಖ
ವಿಚಾರಣೆ ನಡೆಸಿದ ಹೈಕೋರ್ಟ್, ಹಿందూ ವಿವಾಹ ಕಾಯ್ದೆಯ ಸೆಕ್ಷನ್ 7ರ ಪ್ರಕಾರ, ಯಾವುದೇ ಹಿందూ ವಿವಾಹವು ಎರಡೂ ಕಡೆಯವರ ಸಾಂಪ್ರದಾಯಿಕ ಆಚಾರ-ವಿಚಾರಗಳು ಮತ್ತು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನೆರವೇರಬೇಕು ಎಂದು ಸ್ಪಷ್ಟಪಡಿಸಿತು. ವಿಶೇಷವಾಗಿ ಸಪ್ತಪದಿ (ಅಗ್ನಿಯ ಸಮ್ಮುಖದಲ್ಲಿ ಏಳು ಹೆಜ್ಜೆ ಇಡುವುದು) ಕಡ್ಡಾಯವಾಗಿರುವ ಸಂಪ್ರದಾಯಗಳಲ್ಲಿ, ಏಳನೇ ಹೆಜ್ಜೆ ಪೂರ್ಣಗೊಂಡಾಗ ಮಾತ್ರ ವಿವಾಹವು ಕಾನೂನುಬದ್ಧವಾಗಿ ಪೂರ್ಣಗೊಳ್ಳುತ್ತದೆ. ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಮಾಡುವ ಮದುವೆ ನೋಂದಣಿಯು ಈ ಕಡ್ಡಾಯ ಧಾರ್ಮಿಕ ಕ್ರಿಯೆಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಪೀಠ ಪ್ರತಿಪಾದಿಸಿತು.
ನೋಂದಣಿ ಪ್ರಮಾಣಪತ್ರಕ್ಕೆ ಕಾನೂನು ಬದ್ಧತೆಯಿಲ್ಲ
ವಿಚಾರಣೆ ವೇಳೆ ತಮ್ಮಿಡುವೆ ಯಾವುದೇ ಧಾರ್ಮಿಕ ಆಚರಣೆಗಳು ಅಥವಾ ವಿವಾಹದ ಸಂಪ್ರದಾಯಗಳು ನಡೆದಿಲ್ಲ ಎಂದು ಯುವತಿಯೂ ಒಪ್ಪಿಕೊಂಡಿದ್ದಳು. ಈ ಒಪ್ಪಿಗೆಯನ್ನು ಆಧರಿಸಿ ತೀರ್ಪು ನೀಡಿದ ನ್ಯಾಯಾಲಯ, ಮೂಲತಃ ಕಾನೂನಾತ್ಮಕವಾಗಿ ನಡೆಯದ ಮದುವೆಗೆ ಕೇವಲ ನೋಂದಣಿ ಪ್ರಮಾಣಪತ್ರದಿಂದ ಕಾನೂನು ಮಾನ್ಯತೆ ತರಲು ಸಾಧ್ಯವಿಲ್ಲ. ನೋಂದಣಿಯು ಈಗಾಗಲೇ ಚಾಲ್ತಿಯಲ್ಲಿರುವ ಕಾನೂನುಬದ್ಧ ಮದುವೆಯನ್ನು ದಾಖಲಿಸುವ ಪ್ರಕ್ರಿಯೆಯಷ್ಟೇ ಹೊರತು, ಅಸ್ತಿತ್ವದಲ್ಲೇ ಇಲ್ಲದ ಮದುವೆಯನ್ನು ಸಿಂಧುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಈ ಹಿನ್ನೆಲೆಯಲ್ಲಿ ಕುಟುಂಬ ನ್ಯಾಯಾಲಯದ ಹಳೆಯ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಈ ಮದುವೆಯನ್ನು ಆರಂಭದಿಂದಲೇ ಅಸಿಂಧು ಎಂದು ಆದೇಶಿಸಿತು. ಅಲ್ಲದೆ, ಮದುವೆ ನೋಂದಣಿ ಮತ್ತು ಪ್ರಮಾಣಪತ್ರವನ್ನು ರದ್ದುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಅರ್ಜಿದಾರನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ.
ಧಾರ್ಮಿಕ ವಿಧಿವಿಧಾನವಿಲ್ಲದ ವಿವಾಹ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು.!
WhatsApp Group
Join Now