ಐಷಾರಾಮಿ ಹೋಟೆಲ್‌ನಲ್ಲಿ ಇಬ್ಬರು ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ

Spread the love

ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ಪುತ್ರಿಯರನ್ನು ಐಷಾರಾಮಿ ಹೋಟೆಲ್‌ವೊಂದರ ಕೊಠಡಿಯಲ್ಲಿ ಕತ್ತು ಹಿಸುಕಿ ಹತ್ಯೆಗೈದು, ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸೋಮವಾರ ನಡೆದಿದೆ.

ಆರೋಪಿಯನ್ನು ಎಸ್‌.ಜಿ. ಇಮ್ರಾನ್‌ ಎಂದು ಗುರುತಿಸಲಾಗಿದೆ. ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಅನುಮಾನದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಯು ಬರೆದಿಟ್ಟಿದ್ದ ಚೀಟಿಯಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯಾದ ಇಬ್ಬರು ಬಾಲಕಿಯರು 5 ಮತ್ತು 10 ವರ್ಷದವರಾಗಿದ್ದು, ಉತ್ತರ ಬೆಂಗಳೂರಿನ ನಾಗವಾರ ನಿವಾಸಿಗಳಾಗಿದ್ದಾರೆ.

ಪೊಲೀಸರ ಪ್ರಕಾರ, ಇಮ್ರಾನ್‌ ಇಬ್ಬರು ಪುತ್ರಿಯರನ್ನೂ ಕತ್ತು ಹಿಸುಕಿ ಹತ್ಯೆಗೈದ ಬಳಿಕ, ಚಾಕುವಿನಿಂದ ತನ್ನ ಕುತ್ತಿಗೆಯನ್ನು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಆತನ ಕಿರುಚಾಟ ಕೇಳಿದ ಹೋಟೆಲ್‌ ಭದ್ರತಾ ಸಿಬಂದಿ ಕೊಠಡಿಗೆ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ, ಗಾಯಗೊಂಡಿದ್ದ ಇಮ್ರಾನ್‌ನನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್‌ ಕುಮಾರ್‌ ಮಾತನಾಡಿ, ಇಮ್ರಾನ್‌ ಬರೆದಿಟ್ಟಿದ್ದ ಚೀಟಿ ಪೊಲೀಸರಿಗೆ ದೊರೆತಿದೆ. ಪತ್ನಿಯೊಂದಿಗೆ ವಿವಾದವಿದ್ದು, ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆಂಬ ಅನುಮಾನದೆ ಎಂದು ಚೀಟಿಯಲ್ಲಿ ಆರೋಪಿಸಿದ್ದಾನೆ. ಅಲ್ಲದೆ, ಆ ಸಂಬಂಧಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಸಾಕ್ಷ್ಯಗಳಿವೆ ಎಂದೂ ಆತ ಹೇಳಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

“ಇಬ್ಬರು ಬಾಲಕಿಯರ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ” ಎಂದು ಡಿಸಿಪಿ ತಿಳಿಸಿದ್ದಾರೆ.

ಮಾಹಿತಿ ತಿಳಿದು ಕೆಂಪೇಗೌಡ ವಿಮಾನ ನಿಲ್ದಾಣ ಠಾಣೆ ಪೊಲೀಸರು ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಬಾಲಕಿಯರ ಹತ್ಯೆ ಹಾಗೂ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇಮ್ರಾನ್‌ ತನ್ನ ಇಬ್ಬರು ಮಕ್ಕಳನ್ನೂ ಕತ್ತು ಹಿಸುಕಿ ಹತ್ಯೆಗೈದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಘಟನೆಗೆ ನಿಖರ ಕಾರಣ ಮತ್ತು ಹತ್ಯೆಯ ಹಿಂದಿನ ಉದ್ದೇಶದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now

Spread the love

Leave a Reply