ಸಣ್ಣ ಗಡ್ಡೆ ಎಂದು ಸುಮ್ಮನಾಗಬೇಡಿ! ಸ್ತನ ಕ್ಯಾನ್ಸರ್ ಕುರಿತು ವೈದ್ಯಕೀಯವಾಗಿ ತಿಳಿಯಬೇಕಾದ ವಿಷಯಗಳು

Spread the love

1985ರಲ್ಲಿ ಅಮೆರಿಕದಲ್ಲಿ ಆರಂಭಗೊಂಡ ಸ್ತನಕ್ಯಾನ್ಸರ್‌ ಜಾಗೃತಿ ಅಭಿಯಾನ 1992ರಲ್ಲಿ ವಿಶ್ವವ್ಯಾಪಿಯಾಯಿತು. ಅಮೆರಿಕದ ಅಂದಿನ ಅಧ್ಯಕ್ಷರ ಪತ್ನಿ ಬೆಟ್ಟಿ ಫೋರ್ಡ್ ತಮಗೆ ಸ್ತನಕ್ಯಾನ್ಸರ್ ಬಂದಾಗ ಧೈರ್ಯವಾಗಿ ಸಮಾಜಕ್ಕೆ ತಿಳಿಸಿದರು. ಅಂದಿನಿಂದ ಈ ಜಾಗೃತಿಗೆ ಅಧಿಕೃತ ವೇಗ ದೊರೆಯಿತು.

ಎಲ್ಲೆಡೆ ದಸರಾ ಸಂಭ್ರಮ. ನವದಿನಗಳು ದೇವಿಯನ್ನು ಆರಾಧಿಸುವ ಕಾಲ. ಸಮಾಜದ ಶಕ್ತಿಕೇಂದ್ರವಾದ ಮಹಿಳೆಯರನ್ನು ಅತಿ ಹೆಚ್ಚು ಬಾಧಿಸುತ್ತ ಬಂದಿರುವ ಸ್ತನಕ್ಯಾನ್ಸರ್‌ನ ಬಗ್ಗೆಯೂ ಜಾಗೃತಿ ಮೂಡಬೇಕಾದ ಹೊತ್ತಿದು. ಅಕ್ಟೋಬರ್‌ ಅನ್ನು ಸ್ತನಕ್ಯಾನ್ಸರ್‌ನ ಅರಿವಿನ ಮಾಸವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಗುಲಾಬಿ ಬಣ್ಣದ ರಿಬ್ಬನ್‌ ಈ ಜಾಗೃತಿಯ ಸಂಕೇತ.

1985ರಲ್ಲಿ ಅಮೆರಿಕದಲ್ಲಿ ಆರಂಭಗೊಂಡ ಈ ಜಾಗೃತಿ ಅಭಿಯಾನ 1992ರಲ್ಲಿ ವಿಶ್ವವ್ಯಾಪಿಯಾಯಿತು. ಅಮೆರಿಕದ ಅಂದಿನ ಅಧ್ಯಕ್ಷರ ಪತ್ನಿ ಬೆಟ್ಟಿ ಫೋರ್ಡ್ ತಮಗೆ ಸ್ತನದ ಕ್ಯಾನ್ಸರ್ ಬಂದಾಗ ಧೈರ್ಯವಾಗಿ ಸಮಾಜಕ್ಕೆ ತಿಳಿಸಿದರು. ಅಂದಿನಿಂದ ಈ ಜಾಗೃತಿಗೆ ಅಧಿಕೃತ ವೇಗ ದೊರೆಯಿತು.

ಭಾರತ ಸೇರಿದಂತೆ ಪ್ರಪಂಚದಲ್ಲೇ ಮಹಿಳೆಯರನ್ನು ಬಾಧಿಸುವ ಕ್ಯಾನ್ಸರ್‌ಗಳಲ್ಲಿ ಸ್ತನದ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಪ್ರತಿ 28 ಮಹಿಳೆಯರಲ್ಲಿ ಒಬ್ಬರಿಗೆ ಇದು ಬರುವ ಸಾಧ್ಯತೆಯಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದರೆ, ಕರ್ನಾಟಕದಲ್ಲೇ 35,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ಶೇ 50ರಷ್ಟು ಪ್ರಕರಣಗಳು ತಡವಾಗಿ ಪತ್ತೆಯಾಗುತ್ತಿರುವುದು ಸಾವಿನ ಪ್ರಮಾಣ ಹೆಚ್ಚಲು ಮುಖ್ಯ ಕಾರಣವಾಗಿದೆ. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಬದುಕುಳಿಯುವ ಸಾಧ್ಯತೆ ಶೇ 95ರಷ್ಟಿರುತ್ತದೆ. ತಡವಾದರೆ ಈ ಪ್ರಮಾಣ ಶೇ 25ಕ್ಕೆ ಕುಸಿಯುತ್ತದೆ.

ತಪ್ಪಾದ ಜೀವನಶೈಲಿ ಮತ್ತು ಜಾಗೃತಿಯ ಕೊರತೆಯಿಂದಾಗಿ ಈ ಕ್ಯಾನ್ಸರ್‌ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂಕಿ–ಅಂಶಗಳಿಂದ ಭಯ ಭೀತರಾಗದೆ ಜಾಗೃತರಾಗುವುದು ಬಹುಮುಖ್ಯ.

‌ಸ್ತನದ ಜೀವಕೋಶಗಳು ಅಸಹಜವಾಗಿ ಮತ್ತು ಅನಿಯಂತ್ರಿತವಾಗಿ ವಿಭಜನೆಯಾಗುವುದೇ ಸ್ತನಕ್ಯಾನ್ಸರ್. ಇದು ಸ್ತನದ ಹಾಲು ಸಾಗಿಸುವ ನಾಳಗಳಲ್ಲಿ (ಡಕ್ಟಲ್ ಕಾರ್ಸಿನೋಮ) ಅಥವಾ ಹಾಲನ್ನು ಉತ್ಪಾದಿಸುವ ಗ್ರಂಥಿಗಳಲ್ಲಿ (ಲೋಬುಲರ್ ಕಾರ್ಸಿನೋಮ) ಬೆಳೆಯುತ್ತದೆ.

• ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು. ಎಂಟು ಮಹಿಳೆಯರಲ್ಲಿ ಒಬ್ಬರನ್ನು ಬಾಧಿಸಿದರೆ, ಪುರುಷರಲ್ಲಿ ಸಾವಿರದಲ್ಲಿ ಒಬ್ಬರಿಗೆ ಬರಬಹುದು.

• 40 ರಿಂದ 60 ವಯೋಮಿತಿಯಲ್ಲಿ ಇರುವ ಮಹಿಳೆಯರಲ್ಲಿ ಹೆಚ್ಚು ಕಂಡುಬಂದರೂ, ಭಾರತದಲ್ಲಿ ಕಡಿಮೆ ವಯಸ್ಸಿನ ಮಹಿಳೆಯರಲ್ಲಿಯೂ ಈಗೀಗ ಹೆಚ್ಚೆಚ್ಚು ಕಂಡುಬರುತ್ತಿದೆ.

• ಬೇಗ ಋತುಮತಿಯಾಗುವುದು, ತಡವಾಗಿ ಮುಟ್ಟು ನಿಲ್ಲುವುದು, ಬೇರೆ ಕಾರಣಗಳಿಗಾಗಿ ವಿಕಿರಣ ಚಿಕಿತ್ಸೆ ತೆಗೆದುಕೊಂಡಿದ್ದಲ್ಲಿ ಅಥವಾ ವಾತಾವರಣದ ವಿಕಿರಣಕ್ಕೆ ಅತಿಯಾಗಿ ತೆರೆದುಕೊಂಡಾಗ ಈ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ.

ಮದ್ಯಪಾನ, ಧೂಮಪಾನ, ಜಡಜೀವನಶೈಲಿ ಮತ್ತು ಅತಿಯಾದ ಬೊಜ್ಜು ದೇಹದಲ್ಲಿ ‘ಈಸ್ಟ್ರೋಜನ್’ ಮಟ್ಟವನ್ನು ಹೆಚ್ಚಿಸಿ ಸ್ತನಕ್ಯಾನ್ಸರ್‌ನ ಅಪಾಯವನ್ನು ತರುತ್ತವೆ.

ತಡವಾಗಿ ಮಕ್ಕಳನ್ನು ಹಡೆಯುವುದು ಅಥವಾ ಮಕ್ಕಳನ್ನು ಹಡೆಯದೇ ಇರುವುದು, ಕೃಷಿ, ಹೈನುಗಾರಿಕೆಯಲ್ಲಿ ಎಗ್ಗಿಲ್ಲದೇ ಬಳಸುವ ರಾಸಾಯನಿಕಯುಕ್ತ ಕ್ರಿಮಿನಾಶಕಗಳು, ಅತಿ ವಾಹನ ಬಳಕೆಯಿಂದ ಉಂಟಾದ ಕಲುಷಿತ ವಾತಾವರಣ, ಕೃತಕ ಸೌಂದರ್ಯವರ್ಧಕಗಳು ಮತ್ತು ಪ್ಲಾಸ್ಟಿಕ್ ರಾಸಾಯನಿಕಗಳ (ಬಿಸ್ಫಿನಾಲ್, ಥಾಲೇಟ್ಸ್) ಅತಿಯಾದ ಬಳಕೆ, ಜೈವಿಕ ಗಡಿಯಾರವನ್ನು ನಿರ್ಲಕ್ಷಿಸುವಿಕೆಯೂ ಇದಕ್ಕೆ ಕಾರಣವಾಗಬಹುದು.

ಸೂಕ್ತ ಪ್ರತಿಬಂಧಕ ಕ್ರಮಗಳಿಂದ ಸ್ತನ ಕ್ಯಾನ್ಸರ್‌ ಸಂಭವಿಸುವ ಅಪಾಯ ಕಡಿಮೆ ಇರುತ್ತದೆ.

• ಶಿಶುಗಳಿಗೆ ಕನಿಷ್ಠ ಎರಡು ವರ್ಷಗಳ ಕಾಲ ಸ್ತನ್ಯಪಾನ ಮಾಡಿಸುವುದರಿಂದ ಪ್ರತಿ ವರ್ಷ ಕ್ಯಾನ್ಸರ್ ಅಪಾಯ ಶೇ 4.3ರಷ್ಟು ಕಡಿಮೆಯಾಗುತ್ತದೆ. 30 ವರ್ಷದೊಳಗೆ ಮಗುವನ್ನು ಪಡೆಯುವುದರಿಂದಲೂ ನೈಸರ್ಗಿಕ ರಕ್ಷಣೆಯನ್ನು ಒದಗಿಸುತ್ತದೆ.

• ಮದ್ಯಪಾನ, ಧೂಮಪಾನ ತ್ಯಜಿಸುವಿಕೆ. ಈಸ್ಟ್ರೋಜನ್‌ ಹಾರ್ಮೋನು ಹೆಚ್ಚಿಸುವ ರಾಸಾಯನಿಕಗಳಿಗೆ ಒಡ್ಡದಂತೆ ನೋಡಿಕೊಳ್ಳುವುದು.

• ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ತೂಕ ಕಾಯ್ದುಕೊಳ್ಳುವುದು ಅಪಾಯವನ್ನು ಶೇ 10 ರಿಂದ 20ರಷ್ಟು ತಗ್ಗಿಸುತ್ತದೆ. ಕಡಿಮೆ ಕೊಬ್ಬಿನಾಂಶ ಹಾಗೂ ಜಂಕ್‌ಫುಡ್ ಸೇವನೆ, ಹೆಚ್ಚು ನಾರಿನ ಅಂಶಗಳ ಸೇವನೆ, ಒತ್ತಡ ನಿರ್ವಹಣೆಯನ್ನೊಳಗೊಂಡ ಉತ್ತಮ ಜೀವನಶೈಲಿಯಿಂದ ಶೇ 30ಕ್ಕೂ ಹೆಚ್ಚು ಪ್ರಕರಣಗಳನ್ನು ತಡೆಯಬಹುದು.

ಏಳು ಎಚ್ಚರಿಕೆಯ ಕರೆಗಂಟೆಗಳು: ಭಾರತದಲ್ಲಿ ರೋಗಲಕ್ಷಣಗಳನ್ನು, ಚಿಹ್ನೆಗಳನ್ನು ಆರಂಭದಲ್ಲಿ ಗುರುತಿಸದೇ ಇರುವುದು, ಮುಜುಗರ, ಅಥವಾ ಯಾವುದೋ ಪರ್ಯಾಯ ಚಿಕಿತ್ಸೆಗೆ ಮೊರೆಹೋಗಿ, ತಜ್ಞರನ್ನು ಕಾಣದೇ ಸೂಕ್ತವಾಗಿ ಪರೀಕ್ಷಿಸಿಕೊಳ್ಳದೇ ಇರುವುದರಿಂದ ತಡವಾಗಿ ಸ್ತನಕ್ಯಾನ್ಸರ್‌ ಪತ್ತೆಯಾಗಿ ಸಾವು ನೋವು ಹೆಚ್ಚುತ್ತಿದೆ. ಸ್ತನದಲ್ಲಿ ಕಾಣುವ ಶೇ 90ರಷ್ಟು ಗಡ್ಡೆಗಳು ಕ್ಯಾನ್ಸರ್ ಅಲ್ಲದ ‘ಸೌಮ್ಯ’ಗಡ್ಡೆಗಳಾಗಿರುತ್ತವೆ. ಆದರೂ ಈ ಕೆಳಗಿನ ಲಕ್ಷಣಗಳು ಕಂಡರೆ ನಿರ್ಲಕ್ಷಿಸಬೇಡಿ.: l ಸ್ತನದಲ್ಲಿ ನೋವಿಲ್ಲದ ಗಡ್ಡೆ ಅಥವಾ ಉಂಡೆಯ ಅನುಭವ.

• ಕಂಕುಳಲ್ಲಿ ಊದಿಕೊಂಡ ದೊಡ್ಡ ದುಗ್ಧರಸ ಗ್ರಂಥಿ (ಲಿಂಫ್ ನೋಡ್).

• ಎದೆತೊಟ್ಟು ಒಳಗೆ ಎಳೆದಂತಾಗುವುದು.

• ತೊಟ್ಟಿನಿಂದ ರಕ್ತ ಅಥವಾ ನೀರಿನಂತಹ ಸ್ರಾವ.

• ಸ್ತನದ ಗಾತ್ರ ಅಥವಾ ಆಕಾರ ಬದಲಾಗುವುದು.

• ಚರ್ಮ ಕಿತ್ತಳೆ ಸಿಪ್ಪೆಯಂತೆ ಸುಕ್ಕುಗಟ್ಟುವುದು.

ಸ್ತನದ ಕ್ಯಾನ್ಸರ್ ರೋಗನಿರ್ಣಯವು ಮೂರು ಮುಖ್ಯ ಮೌಲ್ಯಮಾಪನದ ಮೇಲೆ ಅವಲಂಬಿಸಿದೆ. ಮೊದಲನೆಯದು ವಿವರವಾದ ಕೌಟುಂಬಿಕ ಚರಿತ್ರೆ, ಎರಡನೆಯದು ಇಮೇಜಿಂಗ್, ಮೂರನೆಯದು ಬಯಾಪ್ಸಿ. ಹಲವು ಸ್ಕ್ರೀನಿಂಗ್‌ ವಿಧಾನಗಳು ಎಂದರೆ ಡಿಜಿಟಲ್ ಮ್ಯಾಮೋಗ್ರಫಿ, ಅಲ್ಟ್ರಾಸೌಂಡ್‌ ಪರೀಕ್ಷೆ, ಎಫ್.ಎನ್.ಎ.ಸಿ ಹಾಗೂ ಬಯಾಪ್ಸಿ ಜತೆಗೆ ಸ್ವಯಂ ಸ್ತನತಪಾಸಣೆ ಅತಿ ಮುಖ್ಯವಾದದ್ದು.

ಪ್ರತಿ ಮಹಿಳೆಯರು ಸ್ವಯಂ ಸ್ತನತಪಾಸಣೆ ಬಗ್ಗೆ ಸೂಕ್ತ ವಿಧಾನವನ್ನು ಅನುಸರಿಸುವುದು ಒಳಿತು. 20ನೇ ವರ್ಷದಿಂದ ವಯಸ್ಸಾಗುವವರೆಗೂ ಪ್ರತಿ ತಿಂಗಳು ಈ ವಿಧಾನವನ್ನು ಅನುಸರಿಸಿ.

ಸ್ತನದಲ್ಲಿ ಯಾವುದಾದರೂ ಅಸಹಜ ಗಂಟುಗಳಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಇದಕ್ಕೆ ಸಂಬಂಧಿಸಿದಂತೆ ಇರುವ ಮ್ಯಾಮೋಗ್ರಫಿ ವಿಶೇಷ ಪರೀಕ್ಷೆಗೆ ಒಳಗಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಸ್ವಯಂ ಸ್ತನತಪಾಸಣೆಯ ವಿಧಾನವನ್ನು ಮಹಿಳೆಯರು ಸ್ವಯಂ ಕಾಳಜಿಯ ಭಾಗವಾಗಿ ಪರಿಗಣಿಸಬೇಕು.

ಈ ಜಾಗೃತಿ ಮಾಸಾಚರಣೆಯು ಸ್ತನದ ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸುವುದಷ್ಟೆ ಅಲ್ಲದೇ, ಕ್ಯಾನ್ಸರ್‌ ತಡೆಗಟ್ಟಲು ಇರುವ ಪ್ರಮುಖ ಅಭಿಯಾನವಾಗಿದೆ. v

ಹಂತಗಳು ಮತ್ತು ಚಿಕಿತ್ಸೆ

ಕ್ಯಾನ್ಸರ್ ಗಾತ್ರ ಮತ್ತು ಹರಡುವಿಕೆಯನ್ನು ಬಯಾಪ್ಸಿ, ಮ್ಯಾಮೊಗ್ರಫಿ ಪರೀಕ್ಷೆಗಳ ಮೂಲಕ 1ರಿಂದ 4 ಹಂತಗಳಾಗಿ ವಿಂಗಡಿಸಲಾಗುತ್ತದೆ. ರೋಗವು ದುಗ್ಧರಸ ಗ್ರಂಥಿಗಳಿಂದ ಶ್ವಾಸಕೋಶ, ಯಕೃತ್ತು, ಮೂಳೆ ಮತ್ತು ಮಿದುಳಿಗೂ ಹರಡಬಹುದು.

ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ ಪ್ರಮುಖ. ಆರಂಭದಲ್ಲಿದ್ದರೆ ಗಡ್ಡೆಯನ್ನು ಮಾತ್ರ, ತೀವ್ರವಾಗಿದ್ದರೆ ಇಡೀ ಸ್ತನವನ್ನು ತೆಗೆದು ನಂತರ ಪ್ಲಾಸ್ಟಿಕ್ ಸರ್ಜರಿ ಮೂಲಕ ಮರುನಿರ್ಮಾಣ ಮಾಡಲಾಗುತ್ತದೆ. ಇದರೊಂದಿಗೆ ಕೀಮೋಥೆರಪಿ, ರೇಡಿಯೋಥೆರಪಿ ಹಾಗೂ ಇಮ್ಯುನೊಹಿಸ್ಟೋಕೆಮಿಸ್ಟ್ರಿ ಪರೀಕ್ಷೆಯ ಆಧಾರದ ಮೇಲೆ ಹಾರ್ಮೋನ್ ಥೆರಪಿ ಮತ್ತು ಟಾರ್ಗೆಟೆಡ್ ಥೆರಪಿಗಳನ್ನು ನೀಡಲಾಗುತ್ತದೆ. ಭಯ ಅಥವಾ ಮುಜುಗರ ಬಿಟ್ಟು ಆರಂಭಿಕ ಹಂತದಲ್ಲೇ ತಪಾಸಣೆ ಮಾಡಿಸಿಕೊಳ್ಳುವುದರಿಂದ ಜೀವವನ್ನು ರಕ್ಷಿಸಬಹುದು.

WhatsApp Group Join Now

Spread the love

Leave a Reply