ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಕೇಸ್ : 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

Spread the love

ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಇಂದು ಶಿಕ್ಷೆ ತೀರ್ಪು ಪ್ರಕಟಿಸಿದರು. ರವಿ, ಮೈಲಾರಿ, ಧನರಾಜ್, ಭೀಮಾ, ಸಲೀಂ ಮತ್ತು ಗಂಗಾಧರ ಗೌಳಿ ಶಿಕ್ಷೆಗೊಳಗಾದ ಅಪರಾಧಿಗಳು.

ಕಳೆದ ಕೆಲವು ವರ್ಷಗಳ ಹಿಂದೆ ನಗರದ ಸಾರ್ವಜನಿಕ ಪ್ರದೇಶದಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅವರ ಭೀಕರ ಕೊಲೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕೊಪ್ಪಳದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ತೀರ್ಪು ನೀಡಿದೆ. ಅಪರಾಧದ ತೀವ್ರತೆ ಮತ್ತು ಕ್ರೌರ್ಯವನ್ನು ಪರಿಗಣಿಸಿದ ನ್ಯಾಯಾಧೀಶರು, ಇದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಅಭಿಪ್ರಾಯಪಟ್ಟು ಆರು ಜನರಿಗೆ ಮರಣದಂಡನೆ ವಿಧಿಸಿದ್ದಾರೆ.

ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಲ್ಲದೇ ಮಾರುತಿ ಚಿಕಿತ್ಸೆಗೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಎಂಬ ಕಾರಣಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದೀರಿ. ಸಭ್ಯ ನಾಗರಿಕ ಸಮಾಜದ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ. ಅಪರಾಧ ಕೃತ್ಯಗಳ ಹಿನ್ನೆಲೆ ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.

ವೆಂಕಟೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರಕರಣ ಸಂಬಂಧ ಆರು ಜನ ಅರೋಪಿಗಳನ್ನು ದೋಷಿ ಎಂದು ಈ ಹಿಂದೆ ಕೋರ್ಟ್ ತೀರ್ಪು ನೀಡಿ, ಇಂದಿಗೆ ಶಿಕ್ಷೆ ಪ್ರಮಾಣ ಕಾಯ್ದಿರಿಸಿತ್ತು. ಅಂತೆಯೇ ಇಂದು ನ್ಯಾಯಾಧೀಶರು, ಆರು ಜನರಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗಳು ಅಗತ್ಯವಿದ್ದರೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಾಧೀಶರು ಸಲಹೆ ತಿಳಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ಮಾಹಿತಿ ನೀಡಿದರು.

WhatsApp Group Join Now

Spread the love

Leave a Reply