ಬೆಂಗಳೂರಿನಲ್ಲಿ ನಿನ್ನೆ (ಏಪ್ರಿಲ್ 29) ಸಂಜೆ ಸುರಿದ ಅಲಿಕಲ್ಲು ಸಹಿತ ಧಾರಾಕಾರ ಮಳೆಗೆ ಭಾರೀ ಅನಾಹುತಗಳು ಸಂಭವಿಸಿದೆ. ಮಳೆಯಿಂದಾಗಿ ಶಿವಾಜಿನಗರ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜನ ಸಾವನ್ನಪ್ಪಿದ್ದು.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಹಾಗೇ ಕೇಂದ್ರ ಸರ್ಕಾರದಿಂದ ಮೃತರು ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ
ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿದ ಪರಿಣಾಮ ಬೀದಿಬದಿ ವ್ಯಾಪಾರ ಮಾಡ್ತುದ್ದ ಐವರು ಹಾಗೂ ಇಬ್ಬರು ಪಾದಚಾರಿಗಳು ಸೇರಿದಂತೆ 7 ಮಂದಿ ಉಸಿರು ಚೆಲ್ಲಿದ್ದು, ಬೆಂಗಳೂರಲ್ಲಿ ಶೋಕ ಮಡುಗಟ್ಟಿದೆ. ಘಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸಂಭವಿಸಿದ ಈ ಅನಾಹುತ ಅತ್ಯಂತ ದುರದೃಷ್ಟಕರ ಎಂದಿದ್ದಾರೆ.
ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ
ಕರ್ನಾಟಕದ ಬೆಂಗಳೂರಿನಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ಅನಾಹುತವು ಅತ್ಯಂತ ದುರದೃಷ್ಟಕರ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುವೆ ಎಂದು ಪ್ರಧಾನ ಮಂತ್ರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಮೃತರಿಗೆ 2 ಲಕ್ಷ ಪರಿಹಾರ
ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
5 ಲಕ್ಷ ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ನಿನ್ನೆ (ಏ.29) ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿ ಪರಿಶೀಲನೆ ನಡೆಸಿದ್ರು. ನಂತರ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದರು.
ಆಸ್ಪತ್ರೆಯ ಕಾಂಪೌಂಡ್ ಪಕ್ಕದಲ್ಲಿ ಸಣ್ಣಪುಟ್ಟ ಅಂಗಡಿ ಮೂಲಕ ವ್ಯಾಪಾರಿ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳು ಮತ್ತು ಮಕ್ಕಳು ಮೇಲೆ ಕಾಂಪೌಂಡ್ ಗೋಡೆ ಕುಸಿದಿದೆ. ಇಬ್ಬರೂ ಮಕ್ಕಳು ಸೇರಿ ಏಳು ಜನ ಸಾವನ್ನಪ್ಪಿದ್ದು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೃತ ದೇಹಗಳ ಹಸ್ತಾಂತರ
ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಘನಘೋರ ದುರಂತಗಳು ಸಂಭವಿಸಿದೆ. ಶಿವಾಜಿನಗರ ಗೋಡೆ ಕುಸಿತದಲ್ಲಿ ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆ ಮುಗಿದಿದ್ದು, ರಾತ್ರಿಯೇ ಮೃತದೇಹಗಳನ್ನ ಹಸ್ತಾಂತರ ಮಾಡಲಾಗಿದೆ.