ಚುನಾವಣಾ ಆಯೋಗ ದುರುಪಯೋಗಪಡಿಸಿಕೊಂಡು ಕರ್ನಾಟಕದಲ್ಲೂ ಗೆಲ್ಲಲು ಬಿಜೆಪಿ ಹುನ್ನಾರ : ಪ್ರಿಯಾಂಕ ಖರ್ಗೆ

Spread the love

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ಗೆದ್ದಿರುವಂತೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಬಿಜೆಪಿ ಹುನ್ನಾರ ನಡೆಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಆಯೋಗವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯ ಗೆಲುವಲ್ಲ, ಚುನಾವಣಾ ಆಯೋಗದ ಗೆಲುವು ಎಂದು ಟೀಕಿಸಿದರು.

ಮಹಾರಾಷ್ಟ್ರ, ಮಧ್ಯಪ್ರದೇಶ, ಹರ್ಯಾಣದಂತೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲೂ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಸ್ಸಾಂನಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯ ಮೂಲಕ ಗೊಂದಲ ಮೂಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌‍ಐಆರ್‌) ಹೆಸರಿನಲ್ಲಿ ಒಂದು ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅದರ ಪರಿಶೀಲನೆಗೆ ನ್ಯಾಯಾಧೀಕರಣ ರಚಿಸಲಾಗಿತ್ತು. 28 ಲಕ್ಷ ಜನ ಅರ್ಹರು ನ್ಯಾಯಾಧೀಕರಣಕ್ಕೆ ಮೇಲನವಿ ಸಲ್ಲಿಸಿದರು, ಆದರೆ ಅವರ ವಾದವನ್ನೇ ಕೇಳಲಿಲ್ಲ ಎಂದು ದೂರಿದರು.

91 ಲಕ್ಷ ಜನರು ಎಸ್‌‍ಐಆರ್‌ನಿಂದಾಗಿ ಮತದಾನದಿಂದ ವಂಚಿತರಾಗಿದ್ದಾರೆ. ಅವರ ಅಹವಾಲು ಕೇಳದೆ ಇದ್ದರೆ ಹೇಗೆ, ಅವರು ದೇಶದ ನಾಗರಿಕರಲ್ಲವೇ ? ಮತದಾರರಲ್ಲವೇ ? ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಮಶ್ಚಿಮ ಬಂಗಾಳದಲ್ಲಿ ಶೇ.4ರಷ್ಟು ಮತಗಳ ವ್ಯತ್ಯಾಸ 80 ರಿಂದ 100 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದೆ. ಇದರಲ್ಲಿ ಮುಚ್ಚುಮರೆ ಏನು ಇಲ್ಲ. ಎಲಲಾ ದತ್ತಾಂಶಗಳು ಕಣ್ಣಮುಂದೆಯೇ ಇವೆ. ಈ ವಿಚಾರವನ್ನು ಕಾನೂನು ಸಮರದ ಮೂಲಕ ಹೇಗೆ ಹೆದರಿಸಬೇಕು ಎಂದು ಪರಿಶೀಲನೆ ನಡೆಯುತ್ತಿದೆ. ಇದೇ ಪ್ರವೃತ್ತಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ನಡೆಯಬಹುದು ಎಂದು ಹೇಳಿದರು.

ತಮಿಳುನಾಡಿನ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ನಿರೀಕ್ಷೆಗಿಂತ ಕಡಿಮೆ ಸ್ಥಾನಗಳು ಬಂದಿವೆ. ಆದರೆ ಜನರ ತೀರ್ಪಿಗೆ ತಲೆಬಾಗಲೇಬೇಕಿದೆ. ಸಂಪೂರ್ಣವಾಗಿ ಯಾರಿಗೂ ಬಹುಮತ ಬಂದಿಲ್ಲ. ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದನ್ನು ಹೈಕಮಾಂಡ್‌ ನಾಯಕರ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಗೆ 8ಇನ್ನೂ ಹೆಚ್ಚಿನ ಮತಗಳು ಬರಬೇಕಿತ್ತು. ಆದರೆ ಕಾಂಗ್ರೆಸ್‌‍ಗೆ ಗೆಲುವಂತೂ ಆಗಿದೆ. ಒಂದು ಮತದಿಂದ ಗೆದ್ದಿದ್ದರೂ ವಿಧಾನಸೌಧದಲ್ಲಿ ಶಾಸಕರಾಗಿರುತ್ತಾರೆ. ಲಿಡ್‌ ಕಡಿಮೆಯಾಗಿರುವುದಕ್ಕೆ ಪಕ್ಷದ ಆಂತರಿಕವಾಗಿ ಚರ್ಚೆ ನಡೆಸಲಾಗುವುದು ಎಂದರು.

ಶೃಂಗೇರಿ ವಿಧಾನಸಭೆ ಕ್ಷೇತ್ರದಲ್ಲಿ ಮತ ಪತ್ರಗಳನ್ನು ತಿರುಚಿರುವುದು ತನಿಖೆಯಾಗುವ ಮುನ್ನವೇ ಫಲಿತಾಂಶ ಘೋಷಿಸಿರುವುದು ಸರಿಯಲ್ಲ. ಕೇಂದ್ರ ಚುನಾವಣಾ ವೀಕ್ಷಕರೇ ಅಂಚೆ ಮತಪತ್ರಗಳನ್ನು ತಿರುಚಿರುವುದು ತನಿಖೆಯಾಗಬೇಕು ಎಂದು ಲಿಖಿತವಾಗಿ ನೀಡಿದ್ದಾರೆ.

ಯಾವುದೇ ತನಿಖೆ ಮಾಡದೇ ಫಲಿತಾಂಶ ಘೋಷಿಸಲಾಗಿದೆ. ಅಲ್ಲಿ ಮೋಸ ನಡೆದಿದೆ. ಅಂಚೆ ಮತ್ರಗಳನ್ನು ಬದಲಾಗಿಸಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಗೆರೆ ಎಳೆಯಲಾಗಿದೆ ಎಂದರು. ಸಚಿವ ಸಂಪುಟ ಪುನರ್‌ ರಚನೆ ಹಾಗೂ ಉಪಚುನಾವಣೆ ಫಲಿತಾಂಶಕ್ಕೂ ಸಂಬಂಧ ಇಲ್ಲ. ಯಾವುದೇ ಪಕ್ಷದ ಸರ್ಕಾರವಿದ್ದರೂ ಎರಡುವರೆ ವರ್ಷದಲ್ಲಿ ಸಂಪುಟ ಪುನರ್‌ ರಚನೆಯಾಗುವುದು ಸಾಮಾನ್ಯ. ಸದ್ಯಕ್ಕೆ ಅದರ ಬಗ್ಗೆ ಚರ್ಚೆ ಇಲ್ಲ. ಚರ್ಚೆಗೆ ಬಂದಾಗ ಹೈಕಮಾಂಡ್‌ ಪರಿಶೀಲಿಸಲಿದೆ.

ಸಂಪುಟ ಪುನರ್‌ ರಚನೆಯಾಗುವುದಿಲ್ಲ ಎಂದು ಪಕ್ಷದ ಹಿರಿಯರು ಈವರೆಗೂ ಹೇಳಿಲ್ಲ. ವದ್ಧಂತಿಗಳಿಗೆಲ್ಲಾ ತಾವು ಉತ್ತರ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ ಮೇಲೆ ಇನ್ಯಾರು ಹೇಳಬೇಕು. ಅದೇ ಸ್ಪಷ್ಟ ಉತ್ತರ ಅಲ್ಲವೇ ? ಅದರ ಬಳಿಕವೂ ನಾವೆಲ್ಲಾ ಮಾತನಾಡುವುದು ಅಪ್ರಸ್ತುತ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಇಂದು ಭೇಟಿ ಮಾಡಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಮಹಾರಾಷ್ಟ್ರದಿಂದ ಕಲ್ಬುರ್ಗಿ ನಗರ, ಅಫ್ಜಲ್‌ ಪುರ, ಅಳಂದ ತಾಲ್ಲೂಕುಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಇದೆ. ಮಹಾರಾಷ್ಟ್ರದಿಂದ ನೀರು ಬಿಡಿಸಬೇಕಿದೆ. ಈ ಸಂಬಂಧ ಪಟ್ಟಂತೆ ಉಪಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದರು.

WhatsApp Group Join Now

Spread the love

Leave a Reply