‘ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗೇನು ಮಾಡ್ತೀರಿ?’ – ಸಿಎಂ ಆರೋಪಕ್ಕೆ ಶಾಸಕ ಜೀವರಾಜ್ ತಿರುಗೇಟು!

Spread the love

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಫಲಿತಾಂಶ ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅಕ್ರಮವೆಸಗಿ ಗೆದ್ದಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪಕ್ಕೆ ಶಾಸಕ ಜೀವರಾಜ್ ಅವರು ಅತ್ಯಂತ ತೀಕ್ಷ್ಣವಾಗಿ ಮತ್ತು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

‘ಸಿಎಂ ಮತ್ತು ಡಿಸಿಎಂ ಅಂತಹ ದೊಡ್ಡವರು ನನ್ನಂತಹ ಸಣ್ಣವನ ಮೇಲೆ ಈ ರೀತಿ ಸವಾರಿ ಮಾಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಣ್ಣ ಕೆಲಸ ಮಾಡಿಸಿಕೊಳ್ಳಲೂ ಆಗಿಲ್ಲ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೀವರಾಜ್, ‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ರಾಜ್ಯದ ದೊಡ್ಡ ನಾಯಕರು. ನನ್ನನ್ನು ಅವರು ಅಷ್ಟು ದೊಡ್ಡವನು ಎಂದು ಅಂದುಕೊಂಡಿದ್ದಾರಲ್ಲ ಎಂದು ಆಶ್ಚರ್ಯವಾಗುತ್ತಿದೆ. ನನಗೆ ಜಿಲ್ಲಾಧಿಕಾರಿ (DC) ಅಥವಾ ಎಸ್ಪಿ (SP) ಕಡೆಯಿಂದ ಒಂದು ಸಣ್ಣ ಕೆಲಸ ಮಾಡಿಸಿಕೊಳ್ಳಲೂ ಆಗಿಲ್ಲ. ಹಾಗಿರುವಾಗ ನಾನು ಚುನಾವಣಾ ಅಕ್ರಮ ಎಸಗಲು ಹೇಗೆ ಸಾಧ್ಯ? ಇದೆಲ್ಲವೂ ಕೇವಲ ರಾಜಕೀಯ ಪ್ರೇರಿತ ಆರೋಪಗಳು’ ಎಂದು ತಿರುಗೇಟು ನೀಡಿದರು.

3 ವರ್ಷಗಳ ವನವಾಸ ಮತ್ತು ಹೋರಾಟ:

ಗೆದ್ದಿದ್ದರೂ ತನ್ನನ್ನು ಮೂರು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘2023ರ ಚುನಾವಣಾ ಎಣಿಕೆಯ ದಿನವೇ ನಾನು ಅಕ್ರಮದ ಬಗ್ಗೆ ಮನವಿ ಮಾಡಿದ್ದೆ. ಅಂದು ರಿಟರ್ನಿಂಗ್ ಆಫೀಸರ್ (RO) ಮರುಎಣಿಕೆ ಮಾಡಬೇಕಿತ್ತು. ಆದರೆ ಎರಡು ದಿನಗಳ ನಂತರ ನನ್ನ ಮನವಿ ತಿರಸ್ಕೃತವಾಯಿತು ಎಂಬ ಪೋಸ್ಟ್ ಬಂತು. ನಂತರ ನಾನು ಹೈಕೋರ್ಟ್ ಮೆಟ್ಟಿಲೇರಿದೆ. ರಾಜೇಗೌಡರು ಸುಪ್ರೀಂ ಕೋರ್ಟ್‌ನಲ್ಲಿ ಸ್ಟೇ ತರಲು ಪ್ರಯತ್ನಿಸಿದರೂ ನ್ಯಾಯಾಲಯ ಮರುಎಣಿಕೆಗೆ ಆದೇಶಿಸಿತು. ಈಗ ನ್ಯಾಯ ಸಿಗುವ ಕಾಲ ಬಂದಾಗ ಈ ರೀತಿ ಆರೋಪ ಮಾಡಲಾಗುತ್ತಿದೆ’ ಎಂದರು.

2023ರಲ್ಲೇ ಅಕ್ರಮ ನಡೆದಿತ್ತು:

ಜೀವರಾಜ್ ಅವರು ತಿರುಗಿಬಿದ್ದು 2023ರಲ್ಲೇ ಅಕ್ರಮ ನಡೆದಿತ್ತು ಎಂದು ಆರೋಪಿಸಿದರು. ‘ಅಂದು ಪೋಸ್ಟಲ್ ವೋಟ್‌ಗಳನ್ನು ಮೊದಲು ಎಣಿಸದೇ ಕೊನೆಯಲ್ಲಿ ಎಣಿಸಿದ್ದು ಏಕೆ? ಅಮಾನ್ಯವಾಗಬೇಕಿದ್ದ ಮತಗಳನ್ನು ರಾಜೇಗೌಡರಿಗೆ ನೀಡಿ ಅವರ ಮತಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು. ಅಂದು ಎಣಿಕೆಯಲ್ಲಿದ್ದ ಅಧಿಕಾರಿಗಳು ಅಕ್ರಮ ಎಸಗಿದ್ದರು. ಈಗ ಸತ್ಯ ಹೊರಬಂದಾಗ ಜೀವರಾಜ್ ಪಿತೂರಿ ಎಂದರೆ ಹೇಗೆ? ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

ನಾನು ಶಾಸಕನಾದರೂ ನಿಮ್ಮ ಸರ್ಕಾರವೇ ಇರುತ್ತದೆ:

‘ನಾನು ಶಾಸಕನಾದರೂ ನಿಮ್ಮ ಸರ್ಕಾರವೇ ಇರುತ್ತದೆ. ನನ್ನ ರಕ್ಷಣೆಗೆ ನೀವೇ ಬರಬೇಕು. ಅದನ್ನು ಬಿಟ್ಟು ನನ್ನ ತಲೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದೀರಿ. ಬೇಕಿದ್ದರೆ ನನ್ನನ್ನು ಕರೆದು ಎಂಎಲ್‌ಎ ಸ್ಥಾನವನ್ನು ವಾಪಸ್ ಕೊಟ್ಟುಬಿಡು ಎಂದು ಹೇಳಿ, ಅಥವಾ ಅರ್ಜಿ ವಿತ್‌ಡ್ರಾ ಮಾಡಿಕೊಳ್ಳಿ ಎಂದು ಹೇಳಿಬಿಡಿ. ಅಷ್ಟೊಂದು ಒತ್ತಡವಿದ್ದರೆ ನಾನು ಏನು ಮಾಡಬೇಕು?’ ಎಂದು ಜೀವರಾಜ್ ಭಾವುಕರಾಗಿ ಪ್ರಶ್ನಿಸಿದರು.

ಅಂತಿಮವಾಗಿ, ನ್ಯಾಯಾಲಯದಲ್ಲಿ ತಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಜೀವರಾಜ್, ಸರ್ಕಾರದ ಒತ್ತಡಕ್ಕೆ ತಾನು ಮಣಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

WhatsApp Group Join Now

Spread the love

Leave a Reply