ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಿಜಯ್ ಅವರ ಟಿವಿಕೆ ಪಕ್ಷದೊಂದಿಗೆ ಕೈಜೋಡಿಸಿ ಪ್ರಚಾರ ಮಾಡಿದ್ದಾರೆ ನಾವು 180 ರಿಂದ 190 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿದ್ದೆವು ಎಂದು ರಾಜ್ಯ ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ಮಂಗಳವಾರ(ಮೇ 5) ಹೇಳಿದ್ದಾರೆ.
ತಳಮಟ್ಟದಲ್ಲಿ ಟಿವಿಕೆಗೆ ಬಾರಿ ಬೆಂಬಲವಿದೆ ಎಂದು ಗೊತ್ತಿತ್ತು. ಹಾಗಾಗಿ, ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಸ್ಥಳೀಯ ನಾಯಕರು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದರು. ಹಾಗಾಗಿದ್ದರೆ, ಅದು ಈ ಚುನಾವಣೆಯಲ್ಲಿ ಪ್ರಭಾವ ಬೀರುತ್ತಿತ್ತು. ನಾವು ತಮಿಳುನಾಡಿನಲ್ಲಿ ಗೆಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಟಿವಿಕೆ ಉತ್ತಮ ಸಾಧನೆ ಮಾಡುತ್ತದೆ ಎಂದು ಗೊತ್ತಿದ್ದರೂ, ಇಂಡಿಯಾ ಕೂಟದ ಪ್ರಮುಖ ಪಕ್ಷಗಳಲ್ಲಿ ಒಂದಾಗಿರುವ ಡಿಎಂಕೆಯೊಂದಿಗಿನ ಮೈತ್ರಿಯನ್ನು ಮುಂದುವರಿಸಲು ಕಾಂಗ್ರೆಸ್ ನಾಯಕರು ಒಲವು ತೋರಿಸಿದ್ದರು. ಈ ಮೈತ್ರಿಯು ಯಾರದೋ ವೈಯಕ್ತಿಕ ನಿರ್ಧಾರವಾಗಿರಲಿಲ್ಲ, ಪಕ್ಷದ ನಿಲುವಾಗಿತ್ತು ಎಂದು ಹೇಳಿದ್ದಾರೆ.
ರಾಜ್ಯದ ಯುವಜನರು ಮತ್ತು ಮಹಿಳೆಯರು ಹೊಸ ಪಕ್ಷದ ಪರವಾಗಿ ಒಲವು ತೋರಿಸಿದ್ದಾರೆ. ಕೆಲವು ಕಾಂಗ್ರೆಸ್ ಕಾರ್ಯಕರ್ತರೇ ಟಿವಿಕೆಗೆ ಬೆಂಬಲ ನೀಡಿದ್ದಾರೆ, ನಮ್ಮ ಮತದಾರರು ಕೂಡ ಅವರಿಗೆ ಮತ ನೀಡಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ರಾಜಕೀಯ ಬೆಳವಣಿಗೆಯ ಕುರಿತು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಹಿತಿ ನೀಡುತ್ತಿದ್ದೇನೆ. ತಮಿಳುನಾಡಿನ ಅಭಿವೃದ್ಧಿಗೆ ಸಹಾಯವಾಗುವ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಅವರು ಬಹುಮತ ಪಡೆಯಲು ಇನ್ನೂ 10 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಟಿವಿಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ವಿಜಯ್ ಜೊತೆ ರಾಹುಲ್ ಪ್ರಚಾರ ಮಾಡಿದ್ದರೆ 180 ಸ್ಥಾನ ಗೆಲ್ಲುತ್ತಿದ್ದೆವು: ತಮಿಳುನಾಡು ಕೈ ನಾಯಕ
WhatsApp Group
Join Now