ಗ್ರಾಹಕರೇ ಗಮನಿಸಿ : ನವೆಂಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್ ಹೊಸ ರೂಲ್ಸ್ ಜಾರಿ!

Spread the love

ನವೆಂಬರ್ ತಿಂಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇಂಡೇನ್, ಎಚ್‌ಪಿ ಗ್ಯಾಸ್ ಹಾಗೂ ಭಾರತ್ ಗ್ಯಾಸ್ ಸೇರಿದಂತೆ ಎಲ್‌ಪಿಜಿ (LPG) ಗ್ರಾಹಕರಿಗೆ ಹೊಸ ನಿಯಮಗಳು (New Rules) ಜಾರಿಗೆ ಬರಲಿವೆ. ಸಿಲಿಂಡರ್ ದರ ಪರಿಷ್ಕರಣೆ, ಇ-ಕೆವೈಸಿ ಪ್ರಕ್ರಿಯೆ, ಬುಕಿಂಗ್ ನಿಯಮಗಳು ಹಾಗೂ ಪಿಎನ್‌ಜಿ ಸಂಪರ್ಕಗಳಿಗೆ ಸಂಬಂಧಿಸಿದಂತೆ ತೈಲ ಕಂಪನಿಗಳು ಕೈಗೊಳ್ಳಲಿರುವ ಮುಖ್ಯ ಬದಲಾವಣೆಗಳ ವಿವರ ಇಲ್ಲಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಏರಿಕೆಯ ಸಾಧ್ಯತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 117 ಡಾಲರ್ ಸಮೀಪಕ್ಕೆ ತಲುಪಿದ್ದು, ಕಳೆದ ನಾಲ್ಕು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಸಾಗಾಟದಲ್ಲಿ ಉಂಟಾಗಿರುವ ವ್ಯತ್ಯಯ ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ನೇರ ಪರಿಣಾಮವಾಗಿ ಪ್ರತಿ ತಿಂಗಳ ಮೊದಲ ದಿನದಂತೆ ನವೆಂಬರ್ 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ತೈಲ ಕಂಪನಿಗಳು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಇರಲಾರದು

ವಾಣಿಜ್ಯ ಸಿಲಿಂಡರ್‌ಗಳಂತೆ ಗೃಹಬಳಕೆಯ 14.2 ಕೆಜಿ ಸಿಲಿಂಡರ್ ದರಗಳು ನೇರವಾಗಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೆ ಒಳಪಡುವುದಿಲ್ಲ. ಕೇಂದ್ರ ತೈಲ ಸಚಿವಾಲಯದ ನೀತಿಯ ಪ್ರಕಾರ, ಸಾಮಾನ್ಯ ಜನರಿಗೆ ಹೊರೆಯಾಗದಂತೆ ಗೃಹ ಸಿಲಿಂಡರ್ ಬೆಲೆಗಳನ್ನು ತಕ್ಷಣಕ್ಕೆ ಬದಲಾಯಿಸುವುದಿಲ್ಲ. ಜೂನ್ 7 ರಿಂದ ದೇಶೀಯ ಸಿಲಿಂಡರ್ ದರಗಳು ಸ್ಥಿರವಾಗಿದ್ದು, ಕಚ್ಚಾ ತೈಲ ದರ ಏರಿಕೆಯ ಹೊರತಾಗಿಯೂ ನವೆಂಬರ್‌ನಲ್ಲಿಯೂ ಗೃಹಬಳಕೆ ಸಿಲಿಂಡರ್ ಬೆಲೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.

ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ದರ ಪರಿಷ್ಕರಣೆ ಕುತೂಹಲ

ಪೈಪ್ ಮೂಲಕ ಪೂರೈಕೆಯಾಗುವ ನೈಸರ್ಗಿಕ ಅನಿಲ ಅಥವಾ ಪಿಎನ್‌ಜಿ ದರಗಳು ನೇರವಾಗಿ ಕಚ್ಚಾ ತೈಲವನ್ನು ಅವಲಂಬಿಸಿಲ್ಲವಾದರೂ, ನಗರ ಅನಿಲ ವಿತರಕರು ಬಳಸುವ ದೇಶೀಯ ಅನಿಲ ಮತ್ತು ಆಮದು ಮಾಡಿಕೊಂಡ ಎಲ್‌ಎನ್‌ಜಿ ಪ್ರಮಾಣದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಈಗಾಗಲೇ ಅಲ್ಪ ಪ್ರಮಾಣದ ದರ ಏರಿಕೆ ಕಂಡಿರುವ ಪಿಎನ್‌ಜಿ ದರಗಳು ಎಲ್‌ಪಿಜಿಗಿಂತ ಅಗ್ಗವಾಗಿದ್ದು, ನವೆಂಬರ್ 1 ರಂದು ಇದರ ಬೆಲೆಯಲ್ಲಿ ಬದಲಾವಣೆ ಆಗಲಿದೆಯೇ ಎಂಬ ಕುತೂಹಲ ಗ್ರಾಹಕರಲ್ಲಿದೆ.

ಎಲ್‌ಪಿಜಿ ಇ-ಕೆವೈಸಿ ಬಯೋಮೆಟ್ರಿಕ್ ಕಡ್ಡಾಯ ನಿಯಮ ಮುಂದುವರಿಕೆ

ಎಲ್‌ಪಿಜಿ ಗ್ರಾಹಕರು ತಮ್ಮ ಸಿಲಿಂಡರ್ ಸಂಪರ್ಕಕ್ಕೆ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸುವುದನ್ನು ತೈಲ ಸಚಿವಾಲಯ ಕಡ್ಡಾಯಗೊಳಿಸಿದೆ. ವಿಶೇಷವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಈ ಪ್ರಕ್ರಿಯೆ ಮುಗಿಸದಿದ್ದರೆ ಅವರಿಗೆ ಸಿಗುವ 200 ರಿಂದ 300 ರೂಪಾಯಿಗಳ ಸಬ್ಸಿಡಿ ಮೊತ್ತ ನೇರ ನಗದು ವರ್ಗಾವಣೆಯಾಗುವುದಿಲ್ಲ. ಬಯೋಮೆಟ್ರಿಕ್ ದೃಢೀಕರಣ ಮುಗಿಸಿದ ನಂತರವೇ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ ಸಾಧ್ಯವಾಗಲಿದೆ.

ಇ-ಕೆವೈಸಿ ಬೇಡವೆನ್ನುವ ಗ್ರಾಹಕರಿಗೆ ಸಬ್ಸಿಡಿ ರಹಿತ ಪರ್ಯಾಯ ವ್ಯವಸ್ಥೆ

ಒಂದು ವೇಳೆ ಗ್ರಾಹಕರು ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಲು ಇಷ್ಟಪಡದಿದ್ದರೆ ಅಥವಾ ಸಾಧ್ಯವಾಗದಿದ್ದರೆ, ಅವರು ಕಂಪನಿಯ ಅಧಿಕೃತ ಪೋರ್ಟಲ್, ಮೊಬೈಲ್ ಆಯಪ್, ವಾಟ್ಸಾಪ್ ಅಥವಾ ಐವಿಆರ್‌ಎಸ್ ಮೂಲಕ ತಮ್ಮ ಆಯ್ಕೆಯನ್ನು ದಾಖಲಿಸಬಹುದು. ಅಂತಹ ಗ್ರಾಹಕರಿಗೆ ಮಾರುಕಟ್ಟೆ ದರದಲ್ಲಿ ಯಾವುದೇ ಸಬ್ಸಿಡಿ ಇಲ್ಲದೆ ಲಭ್ಯತೆಗೆ ಅನುಗುಣವಾಗಿ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್‌ಗಳನ್ನು ಮಾತ್ರ ಒದಗಿಸಲು ಸಚಿವಾಲಯ ಅವಕಾಶ ನೀಡಿದೆ.

ಸಿಲಿಂಡರ್ ಮರುಪೂರಣ ಬುಕಿಂಗ್‌ಗೆ 25 ದಿನಗಳ ಕಡ್ಡಾಯ ಅಂತರ

ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಸಿಲಿಂಡರ್ ಮರು ಬುಕಿಂಗ್ ಮಾಡುವ ನಡುವಿನ ಕನಿಷ್ಠ ಅಂತರವನ್ನು 25 ದಿನಗಳನ್ನಾಗಿ ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಇದ್ದ 45 ದಿನಗಳ ಅವಧಿಯನ್ನು ಕಡಿಮೆ ಮಾಡಲಾಗಿದ್ದರೆ, ನಗರ ಭಾಗದಲ್ಲಿ ಈ ಅಂತರ 21 ದಿನಗಳಿಂದ 25 ದಿನಗಳಿಗೆ ಮುಂದುವರಿದಿದೆ. ಗ್ರಾಹಕರು ಒಂದು ಸಿಲಿಂಡರ್ ಪಡೆದ 25 ದಿನಗಳ ನಂತರವಷ್ಟೇ ಮುಂದಿನ ಸಿಲಿಂಡರ್ ಬುಕ್ ಮಾಡಲು ಸಾಧ್ಯ.

ಮೈಪಿಎನ್‌ಜಿ ಪೋರ್ಟಲ್ ಆರಂಭ ಹಾಗೂ 30 ದಿನಗಳ ಸಿಲಿಂಡರ್ ರದ್ದತಿ ನಿಯಮ

ಪೈಪ್ಡ್ ಗ್ಯಾಸ್ ಸಂಪರ್ಕವನ್ನು ತ್ವರಿತವಾಗಿ ವಿಸ್ತರಿಸಲು ಕೇಂದ್ರ ಸರ್ಕಾರವು ‘ಮೈಪಿಎನ್‌ಜಿ ಪೋರ್ಟಲ್’ ಆರಂಭಿಸಿದ್ದು, ಗ್ರಾಹಕರು ಮತ್ತು ಸಿಟಿ ಗ್ಯಾಸ್ ವಿತರಕರ ನಡುವಿನ ಸೇವೆಗಳನ್ನು ಸುಲಭಗೊಳಿಸಿದೆ. ಇನ್ನು ಮನೆಗೆ ಪಿಎನ್‌ಜಿ ಸಂಪರ್ಕ ಪಡೆದುಕೊಂಡ ಗ್ರಾಹಕರು ತಾವು ಬಳಸುತ್ತಿದ್ದ ಇಂಡೇನ್, ಎಚ್‌ಪಿ ಅಥವಾ ಭಾರತ್ ಗ್ಯಾಸ್ ಎಲ್‌ಪಿಜಿ ಸಂಪರ್ಕವನ್ನು 30 ದಿನಗಳ ಒಳಗಾಗಿ ಕಡ್ಡಾಯವಾಗಿ ರದ್ದುಪಡಿಸಬೇಕೆಂಬ ನಿಯಮ ಮುಂದುವರಿಯಲಿದೆ.

ಸಿಲಿಂಡರ್ ವಿತರಣೆಗೆ ಒಟಿಪಿ ಹಾಗೂ ಒಂದೇ ಕುಟುಂಬಕ್ಕೆ ಒಂದೇ ಸಂಪರ್ಕ ನಿಯಮ

ಎಲ್‌ಪಿಜಿ ಸಿಲಿಂಡರ್ ವಿತರಣೆಯ ವೇಳೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ವಿತರಕರಿಗೆ ನೀಡುವುದು ಕಡ್ಡಾಯವಾಗಿದ್ದು, ಒಟಿಪಿ ಇಲ್ಲದೆ ಸಿಲಿಂಡರ್ ಪೂರೈಕೆ ಪೂರ್ಣಗೊಳ್ಳುವುದಿಲ್ಲ. ಇದರೊಂದಿಗೆ ಕಾಳಸಂತೆ ತಡೆಗಟ್ಟಲು ಜಾರಿಯಲ್ಲಿರುವ ‘ಒಂದು ಮನೆಗೆ ಒಂದೇ ಅಡುಗೆ ಅನಿಲ ಸಂಪರ್ಕ’ ನಿಯಮವು ನವೆಂಬರ್ ತಿಂಗಳಲ್ಲೂ ಕಟ್ಟುನಿಟ್ಟಾಗಿ ಮುಂದುವರಿಯಲಿದೆ.

WhatsApp Group Join Now

Spread the love

Leave a Reply