ಸಂಬಂಧದಲ್ಲಿ ಸೋದರನಾಗಬೇಕಿದ್ದ ವ್ಯಕ್ತಿಯ ಜೊತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ಬಯಲಾದ ಬೆನ್ನಲ್ಲೇ, ತೀವ್ರ ಮನನೊಂದ ಪತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ.
ನೆರಿಗಾ ಗ್ರಾಮದ ನಿವಾಸಿ, ಆಟೋ ಚಾಲಕ ಮುನಿಕೃಷ್ಣ (35) ಮೃತ ದುರ್ದೈವಿ.
ಘಟನೆಯ ಹಿನ್ನೆಲೆ:
ಮುನಿಕೃಷ್ಣ ಸುಮಾರು ಹತ್ತು ವರ್ಷಗಳ ಹಿಂದೆ ನಯನ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಆರು ವರ್ಷದ ಗಂಡು ಮಗನಿದ್ದು, ಸದ್ಯ ನಯನ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದರು. ಇವರ ಅನ್ಯೋನ್ಯ ದಾಂಪತ್ಯ ಜೀವನಕ್ಕೆ ಮುನಿಕೃಷ್ಣನ ಸಂಬಂಧಿಯೇ ಆದ ಕುಮಾರ್ ಎಂಬಾತನ ಪ್ರವೇಶದಿಂದ ಬಿರುಕು ಮೂಡಿತ್ತು. ಕ್ಯಾಬ್ ಚಾಲಕನಾಗಿದ್ದ ಕುಮಾರ್, ನಯನಾಳನ್ನು ಕೆಲಸದ ಸ್ಥಳಕ್ಕೆ ಕಾರಿನಲ್ಲಿ ಕರೆದೊಯ್ದು ಕರೆತರುತ್ತಿದ್ದ. ಸಂಬಂಧದಲ್ಲಿ ಸೋದರನೇ ಆಗಿದ್ದ ಕಾರಣ ಕುಟುಂಬಸ್ಥರು ಆರಂಭದಲ್ಲಿ ಯಾವುದೇ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೆ, ಇದನ್ನೇ ದುರುಪಯೋಗಪಡಿಸಿಕೊಂಡ ಕುಮಾರ್ ಹಾಗೂ ನಯನಾ ನಡುವೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಬೆಳೆದಿತ್ತು. ಮುನಿಕೃಷ್ಣ ಆಟೋ ಓಡಿಸಲು ಮನೆಯಿಂದ ತೆರಳಿದ ಬೆನ್ನಲ್ಲೇ ಕುಮಾರ್ ಮನೆಗೆ ಬರುತ್ತಿದ್ದ ಎನ್ನಲಾಗಿದೆ.
ವಿಷಯ ಬಯಲು ಮತ್ತು ಸಂಸಾರದಲ್ಲಿ ಕಲಹ:
ಸುಮಾರು ಮೂರು ತಿಂಗಳ ಹಿಂದೆ ಈ ಅನೈತಿಕ ಸಂಬಂಧ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೆ, ಕುಮಾರ್ ಸ್ವತಃ ಮುನಿಕೃಷ್ಣನ ವಾಟ್ಸಾಪ್ ಮೊಬೈಲ್ಗೆ ನಯನಾ ಜೊತೆಗಿದ್ದ ಖಾಸಗಿ ಫೋಟೋಗಳು, ಅಸಭ್ಯ ವಿಡಿಯೋಗಳು ಹಾಗೂ ಚಾಟಿಂಗ್ ವಿವರಗಳನ್ನು ಕಳುಹಿಸಿ ವಿಕೃತಿ ಮೆರೆದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ದಂಪತಿ ನಡುವೆ ತೀವ್ರ ಗಲಾಟೆ ನಡೆದು, ನಯನ ಗಂಡನ ಮನೆ ತೊರೆದು ತವರು ಮನೆಗೆ ತೆರಳಿದ್ದರು.
ಸಂಬಂಧಿಯ ನಂಬಿಕೆ ದ್ರೋಹ ಹಾಗೂ ಪತ್ನಿಯ ಅಕ್ರಮ ಸಂಬಂಧದಿಂದ ಸಮಾಜದಲ್ಲಿ ತೀವ್ರ ಮುಜುಗರ ಮತ್ತು ಮಾನಸಿಕ ಯಾತನೆ ಅನುಭವಿಸುತ್ತಿದ್ದ ಮುನಿಕೃಷ್ಣ, ಕೊನೆಗೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಿನ್ನ ಹೆಂಡತಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು: ತಮ್ಮನ ಮಾತುಕೇಳಿ ಪ್ರಾಣಬಿಟ್ಟ ಅಣ್ಣ.! ವಾಟ್ಸಾಪ್ಗೆ ಖಾಸಗಿ ಫೋಟೋ, ವಿಡಿಯೋ ಕಳುಹಿಸಿ ಕಿರುಕುಳ.?
WhatsApp Group
Join Now