ಡಿಕೆ ಶಿವಕುಮಾರ್ ಸಿಎಂ (CM DK Shivakumar) ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಸಿಎಂ ಆದ 48 ಗಂಟೆಗಳಲ್ಲೇ ಡಿಕೆಶಿ ಸರ್ಕಾರಕ್ಕೆ ಶಾಕ್ ಎದುರಾಗಿದೆ. ಹಿರಿಯ ಶಾಸಕ ರಾಮಲಿಂಗಾರೆಡ್ಡಿ (Ramalinga Reddy) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಕೂಡ ಅಸಮಾಧಾನ ಹೊರಹಾಕಿದ್ದರು. ಹಳೆ ಖಾತೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ, ಬೇರೊಂದು ಖಾತೆಗೆ ಬೇಡಿಕೆ ಇಟ್ಟಿದ್ದರು. ಇದೀಗ ಮುನಿಯಪ್ಪಗೆ ರಾಹುಲ್ ಗಾಂಧಿ (Rahul Gandhi) ಬುದ್ಧಿಮಾತು ಹೇಳಿದ್ದಾರಂತೆ.
ಹಳೆ ಖಾತೆ ನೀಡಿದ್ದಕ್ಕೆ ಮುನಿಯಪ್ಪ ಬೇಸರ
ಕೆಎಚ್ ಮುನಿಯಪ್ಪ ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಸಚಿವರಾಗಿದ್ದರು. ಇದೀಗ ಡಿಕೆಶಿ ಸರ್ಕಾರದಲ್ಲೂ ಅವರಿಗೆ ಅದೇ ಖಾತೆ ನೀಡಲಾಗಿದೆ. ಮುನಿಯಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಬೇಡಿಕೆ ಇಟ್ಟಿದ್ದರು. ಆದ್ರೆ ಹೈಕಮಾಂಡ್ ಅವರಿಗೆ ಆಹಾರ & ನಾಗರಿಕ ಸರಬರಾಜು ಇಲಾಖೆ ನೀಡಿದೆ. ಇದ್ರಿಂದ ಬೇಸರಗೊಂಡ ಮುನಿಯಪ್ಪ, ನಾನು ಕೇಳಿದ ಖಾತೆ ಕೊಡದೆ ಹಳೇ ಖಾತೆಯನ್ನೇ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಮುನಿಯಪ್ಪ
ತಮಗೆ ಕೊಟ್ಟಿರುವ ಖಾತೆಯನ್ನ ಬದಲಿಸುವಂತೆ ಸಚಿವ ಕೆ. ಹೆಚ್ ಮುನಿಯಪ್ಪ ಅವರು ಹೈಕಮಾಂಡ್ ನಾಯಕರಿಗೆ ಒತ್ತಾಯಿಸಿದ್ದು, ನನ್ನ ಖಾತೆ ಬದಲಾವಣೆ ಮಾಡುವವರೆಗೂ ನಾನು ಅಧಿಕಾರವಹಿಸಿಕೊಳ್ಳಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸ್ವಲ್ಪ ಅನುಸರಿಸಿಕೊಂಡು ಹೋಗಿ
ಇದೀಗ ಕೆಹೆಚ್ ಮುನಿಯಪ್ಪಗೆ ರಾಹುಲ್ ಗಾಂಧಿ ಬುದ್ದಿಮಾತು ಹೇಳಿದ್ದಾರಂತೆ. ನೀವು ಸೀನಿಯರ್ ಇದ್ದೀರಿ, ಸ್ವಲ್ಪ ಅನುಸರಿಸಿಕೊಂಡು ಹೋಗಿ ಎಂದಿದ್ದಾರಂತೆ. ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಅವ್ರನ್ನು ಭೇಟಿ ಮಾಡಿದ್ದ ವೇಳೆ ಸಚಿವ ಕೆಎಚ್ ಮುನಿಯಪ್ಪಗೆ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರಂತೆ.
ನನ್ನ ಸಮಸ್ಯೆ ಬಗೆಹರಿಸಿ ಎಂದ ಮುನಿಯಪ್ಪ
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುನಿಯಪ್ಪ, ನಾನು ಪಕ್ಷದಲ್ಲಿ ಎಲ್ಲರಗಿಂತ ಸೀನಿಯರ್. ನನಗಿಂತ ಕಿರಿಯರಿಗೆ ಒಳ್ಳೆಯ ಖಾತೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ ನನಗೆ ಆಗಿರುವ ಸಮಸ್ಯೆ ಬಗೆಹರಿಸಬೇಕು ಅಂತ ಮುನಿಯಪ್ಪ ಹೇಳಿದ್ದಾರಂತೆ.
ಡಿಕೆಶಿಗೆ ರಾಹುಲ್ ಗಾಂಧಿ ಸೂಚನೆ
ಈ ವೇಳೆ ಸಿಎಂ ಡಿಕೆಶಿ ಜೊತೆ ಮಾತಾಡ್ತೀನಿ ಎಂದ ರಾಹುಲ್ ಗಾಂಧಿ, ಬಳಿಕ ರಾಜ್ಯದ ಪ್ರಸ್ತುತ ಬೆಳವಣಿಗೆ ಹಾಗೂ ಖಾತೆ ಕ್ಯಾತೆಯ ಬಗ್ಗೆ ಡಿಕೆ ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ರಂತೆ. ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರಂತೆ.
ಇರುವ ಖಾತೆಯನ್ನೇ ಮುಂದುವರೆಸೋ ಬಗ್ಗೆ ನಿರ್ಧಾರ
ಒಬ್ಬರಿಗೆ ಖಾತೆ ಬದಲಾವಣೆ ಮಾಡಿದ್ರೆ ಮತ್ತೆ ಉಳಿದವರು ಕೂಡ ಖಾತೆ ಬದಲಾವಣೆ ಮಾಡುವಂತೆ ಒತ್ತಡ ಹೇರುವ ಸಾಧ್ಯತೆ ಇದೆ. ಅದಕ್ಕಾಗಿ ಯಾವುದೇ ಖಾತೆ ಬದಲಾಯಿಸದೇ ಇರುವ ಬಗ್ಗೆ ಸಿಎಂ ಡಿಕೆಶಿ ಆಲೋಚನೆ ಮಾಡಿದ್ದಾಂತೆ. ಬಹುತೇಕ ಇವಾಗ ಇರುವ ಮಂತ್ರಿಗಳಿಗೆ ಅದೇ ಖಾತೆಯಲ್ಲೇ ಮುಂದುವರಿಯುವಂತೆ ಸೂಚನೆ ನೀಡಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅವಕಾಶ
ಇನ್ನು ತಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದ ಬಗ್ಗೆ ಖುದ್ದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವಾಲಯದಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಒದಗಿಸಲಾಗುವುದು ಎಂದಿದ್ದಾರೆ. ಬಹಳಷ್ಟು ಹುದ್ದೆಗಳು ಖಾಲಿ ಇವೆ. ಕಳೆದ ಬಾರಿಯೂ ಸಹ, ಮೊದಲ ಸುತ್ತಿನಲ್ಲಿ ಮಹಿಳೆಯರು ಇರಲಿಲ್ಲ. ಇದೀಗ ಮುಂದಿನ ದಿನಗಳಲ್ಲಿ ಅವಕಾಶ ನೀಡುತ್ತೇವೆ ಎಂದಿದ್ದಾರೆ.
‘ನೀವು ಸೀನಿಯರ್, ಸ್ವಲ್ಪ ಅನುಸರಿಸಿಕೊಂಡು ಹೋಗಿ!’ ಮುನಿಯಪ್ಪಗೆ ರಾಹುಲ್ ಗಾಂಧಿ ಬುದ್ಧಿಮಾತು
WhatsApp Group
Join Now