ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಡಿಕೆ ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿದ್ದು, ಜೂನ್ 3ರಂದು ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಡಿಕೆ ಶಿವಕುಮಾರ್ ಜತೆಗೆ ಉಪ ಮುಖ್ಯಮಂತ್ರಿಯಾಗಿ ಜಿ ಪರಮೇಶ್ವರ್ ಸೇರಿದಂತೆ ಇನ್ನೂ 12 ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದರು.
ಆ ಸಮಯದಲ್ಲಿ ಯಾರಿಗೆ ಯಾವ ಖಾತೆ ಎಂಬುದನ್ನು ಬಹಿರಂಗಪಡಿಸದಿದ್ದರೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಯಾವ ಖಾತೆ ಎಂಬುದನ್ನು ಘೋಷಣೆ ಮಾಡಿತು. ಹೀಗೆ ಎಲ್ಲವೂ ಚೆನ್ನಾಗಿ ಸಾಗುತ್ತಿದೆ, ಬಹು ವರ್ಷಗಳ ಆಸೆಯಂತೆ ಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಆಡಳಿತ ಯಾವುದೇ ಅಡ್ಡಿಯಿಲ್ಲದೇ ಚೆನ್ನಾಗಿ ಆರಂಭವಾಗಿದೆ ಎನ್ನುವಾಗಲೇ ನಿನ್ನೆ ( ಜೂನ್ 5 ) ಬೆಳ್ಳಂಬೆಳಗ್ಗೆ ರಾಮಲಿಂಗಾರೆಡ್ಡಿ ತಮಗೆ ನೀಡಿದ್ದ ಜಲ ಸಂಪನ್ಮೂಲ ಖಾತೆಗೆ ರಾಜೀನಾಮೆ ನೀಡಿದರು.
ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ ತಾವು ಯಾವ ಖಾತೆಗೂ ಬೇಡಿಕೆ ಇಟ್ಟಿರಲಿಲ್ಲ, ಡಿಕೆಶಿ ಅವರೇ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಹೇಳಿದ್ದರು, ಹೀಗೆ ಅವರೇ ಆಶ್ವಾಸನೆ ಕೊಟ್ಟು ಬೇರೆ ಖಾತೆ ನೀಡಿದ್ದಾರೆ ಎಂದು ಕಾರಣ ನೀಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದರು.
ಇನ್ನು ಅಧಿಕಾರ ವಹಿಸಿಕೊಂಡ ಎರಡೇ ದಿನಕ್ಕೆ ಡಿಕೆಶಿ ಸಂಪುಟದಲ್ಲಿ ಈ ಮಟ್ಟಿಗಿನ ಅಸಮಾಧಾನ ಉದ್ಭವಿಸಿದ್ದು ಹಿನ್ನಡೆ ಆಗಲಿದೆಯಾ, ಡಿಕೆಶಿ ರಾಮಲಿಂಗಾರೆಡ್ಡಿ ಅವರನ್ನು ಯಾವ ರೀತಿ ಸಮಾಧಾನಪಡಿಸುತ್ತಾರೆ, ಅವರು ಆಶ್ವಾಸನೆ ಕೊಟ್ಟ ಹಾಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ಕೊಟ್ಟು ಸರಿಪಡಿಸ್ತಾರಾ ಎಂಬ ಪ್ರಶ್ನೆಗಳು ಉಂಟಾದವು.
ಡಿಕೆ ಶಿವಕುಮಾರ್ ನಿನ್ನೆ ರಾತ್ರಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಸಮಾಧಾನಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಮೂಲಗಳ ಪ್ರಕಾರ ಹೈಕಮಾಂಡ್ ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಅವರ ಖಾತೆಯನ್ನು ಬದಲಿಸಬೇಡಿ ಎಂದು ಡಿಕೆಶಿಗೆ ಖಡಕ್ ಆಗಿ ತಿಳಿಹೇಳಿದೆ.
ಏಕೆಂದರೆ ರಾಮಲಿಂಗಾರೆಡ್ಡಿ ಅವರ ಮುನಿಸಿಗೆ ಸ್ಪಂದಿಸಿ ಖಾತೆ ಬದಲಿಸಿದರೆ ಇತರೆ ಸಚಿವರೂ ಸಹ ಖಾತೆ ಬದಲಾವಣೆಗೆ ಬೇಡಿಕೆ ಇಡುವ ಸಾಧ್ಯತೆಗಳು ಹೆಚ್ಚಿದೆ. ಅಲ್ಲದೇ ಇನ್ನುಳಿದ 20 ಸಚಿವರ ನೇಮಕವಾಗುವಾಗಲೂ ಶಾಸಕರು ತಮಗಿದೇ ಖಾತೆ ಬೇಕೆಂದು ಪಟ್ಟುಹಿಡಿಯುವ ಸಾಧ್ಯತೆ ಇರುವ ಕಾರಣ ಹೈಕಮಾಂಡ್ ಕಡ್ಡಿ ಮುರಿದ ಹಾಗೆ ಬದಲಾವಣೆಯ ಮಾತೇ ಇಲ್ಲ ಎಂದಿದೆ ಎನ್ನಲಾಗಿದೆ.
ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಮಾಡಬೇಡಿ ; ಡಿಕೆಗೆ ಖಡಕ್ ಆಗಿ ಹೇಳಿ ಕೈತೊಳೆದುಕೊಂಡ ಹೈಕಮಾಂಡ್.!
WhatsApp Group
Join Now