ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗುವ ಮುನ್ಸೂಚನೆ ಇದೆ. ಬಹುತೇಕ ಜಲಾಶಯಗಳಲ್ಲಿ ಒಳಹರಿವು ಶೂನ್ಯಕ್ಕೆ ತಲುಪಿದೆ. ಆದ್ದರಿಂದ, ರೈತರು ಅಣೆಕಟ್ಟು ನೀರು ನಂಬಿಕೊಂಡು ಯಾವುದೇ ಕಾರಣಕ್ಕೂ ಬೆಳೆಗಳನ್ನು ಬೆಳೆಯಬಾರದು. ನೀರು ಹರಿಸುವಂತೆ ಒತ್ತಡ ಹೇರಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಎಲ್ಲಾ ಸಚಿವರು ತಮಗೆ ವಹಿಸಿರುವ ಜಿಲ್ಲೆಗಳಿಗೆ ತೆರಳಿ ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ‘ಈ ವರ್ಷ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಭೀಕರ ಬರಗಾಲ ಎದುರಾಗುವ ಮುನ್ಸೂಚನೆಯಿದೆ. ಬಹುತೇಕ ಜಲಾಶಯಗಳಲ್ಲಿ ಒಳಹರಿವು ಶೂನ್ಯಕ್ಕೆ ತಲುಪಿದೆ. ಹೀಗಾಗಿ ಅಣೆಕಟ್ಟು ನೀರು ನಂಬಿಕೊಂಡು ಯಾವುದೇ ಕಾರಣಕ್ಕೂ ಬೆಳೆಗಳನ್ನು ಬೆಳೆಯಬೇಡಿ’ ಎಂದು ರೈತರಿಗೆ ಮನವಿ ಮಾಡಿದರು.
‘ನೀರು ಹರಿಸುವ ವಿಚಾರದಲ್ಲಿ ರೈತರು ಒತ್ತಡ ಹಾಕಬಾರದು. ನೀರು ಇಲ್ಲದೆ ನೀರು ಹರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮಳೆ ನೋಡಿಕೊಂಡು ಆಲೋಚನೆ ಮಾಡಿ. ಮಳೆ ಬಂದರೆ ನೀರು ಪೂರೈಸುತ್ತೇವೆ. ಜಲಾಶಯಗಳು ಭರ್ತಿಯಾಗದ ಹೊರತು ಬೆಳೆಗಳನ್ನು ಹಾಕಲು ಹೋಗಬೇಡಿ’ ಎಂದು ಸಲಹೆ ನೀಡಿದರು.
‘ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಹಲವು ಜಲಾಶಯಗಳಲ್ಲಿ ಒಳಹರಿವು ಶೇ 20ಕ್ಕಿಂತಲೂ ಕಡಿಮೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ವಾಣಿವಿಲಾಸ ಅಣೆಕಟ್ಟುಗಳ ಒಳಹರಿವಿನ ಪ್ರಮಾಣ ಶೂನ್ಯವಾಗಿದೆ. ಕಾವೇರಿ ನದಿಪಾತ್ರದಲ್ಲಿ ಮಳೆ ಪ್ರಮಾಣ ಕುಸಿದಿದೆ. ಹೀಗಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲೂ ಸಮಸ್ಯೆಯಿದೆ’ ಎಂದರು.
‘ಕಳೆದ ವರ್ಷ ಇದೇ ಅವಧಿಯಲ್ಲಿ ಹೇಮಾವತಿಯಲ್ಲಿ 80 ಟಿಎಂಸಿ ಅಡಿ ನೀರು ಇತ್ತು. ಈ ವರ್ಷ 40 ಟಿಎಂಸಿ ಅಡಿಗೆ ಕುಸಿದಿದೆ. ಕೆಆರ್‌ಎಸ್‌ನಲ್ಲಿ 100 ಟಿಎಂಸಿ ಅಡಿ ಇದ್ದ ನೀರು ಈಗ 22 ಟಿಎಂಸಿ ಅಡಿಯಷ್ಟಿದೆ. ಕಬಿನಿಯಲ್ಲಿ 79 ಟಿಎಂಸಿ ಅಡಿ ಇತ್ತು, ಈಗ 26 ಟಿಎಂಸಿ ಅಡಿಗೆ ಇಳಿದಿದೆ. ಈ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಶೇ 20ಕ್ಕೆ ಕುಸಿದಿರುವುದರಿಂದ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಪ್ರಕೃತಿ ವಿಕೋಪ ಸಂಭವಿಸಿದಾಗ ನಿರ್ವಹಣೆಯ ಮೇಲುಸ್ತುವಾರಿಗೆ ಸಚಿವರನ್ನು ಈಗಾಗಲೇ ನಿಯೋಜಿಸಲಾಗಿದೆ. ಜವಾಬ್ದಾರಿ ನೀಡಿರುವ 2-3 ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ನಡೆಸುವಂತೆ ಸಚಿವರಿಗೆ ಸೂಚನೆ ನೀಡಿದ್ದೇನೆ. ನಾನು ನಾಲ್ಕು ಕಂದಾಯ ವಿಭಾಗಗಳಿಗೂ ತೆರಳಿ ಪರಿಶೀಲನೆ ಮಾಡುತ್ತೇನೆ. ಜಿಲ್ಲಾ ಕೇಂದ್ರಗಳಿಗೂ ಹೋಗುತ್ತೇನೆ’ ಎಂದರು.
‘ದೇಶದಲ್ಲೇ ಭೀಕರ ಬರಗಾಲ ಬರಲಿದೆ ಎಂದು ಕೇಂದ್ರ ಸರ್ಕಾರ ಸಂದೇಶ ನೀಡಿದೆ. ನೀರು ಹಾಗೂ ವಿದ್ಯುತ್ ವಿಚಾರವಾಗಿ ಪ್ರಧಾನಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ವಿಚಾರವಾಗಿ ಇಂಧನ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಮೇವು ಹಾಗೂ ಕುಡಿಯುವ ನೀರಿನ ವಿಚಾರವಾಗಿ ಜಿಲ್ಲಾ ಸಚಿವರಿಗೆ ಪ್ರವಾಸ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಹಣದ ಕೊರತೆ ಇಲ್ಲ. ಅಗತ್ಯ ಇರುವ ಕಡೆಗಳಲ್ಲಿ ತುರ್ತಾಗಿ ಕೊಳವೆ ಬಾವಿ ಕೊರೆಯಲು ಕೂಡಾ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ನಾವು ಎಚ್ಚರಿಕೆಯಿಂದ ಇರಬೇಕು’ ಎಂದರು.
‘ವಿದ್ಯುತ್ ಪೂರೈಕೆ ಖಾಸಗೀಕರಣಕ್ಕೆ ಸಹಮತವಿಲ್ಲ’
‘ವಿದ್ಯುತ್ ಪೂರೈಕೆಯ ಖಾಸಗೀಕರಣಕ್ಕೆ ಸರ್ಕಾರದ ಸಹಮತ ಇಲ್ಲ. ವಿದ್ಯುತ್ ಪೂರೈಕೆಯನ್ನು ಖಾಸಗಿಯವರಿಗೆ ನೀಡುವುದನ್ನು ವಿರೋಧಿಸಿ ಕೆಇಆರ್‌ಸಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಲ್ಲ ಎಸ್ಕಾಂಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.
‘ಹಿಂದೆ ಬಿಜೆಪಿ ಸರ್ಕಾರ ಖಾಸಗಿಯವರಿಗೆ ಪರವಾನಗಿ ಪಡೆಯಲು ಅವಕಾಶ ನೀಡಿತ್ತು. ಅದರ ಆಧಾರದಲ್ಲಿ ಟಾಟಾ ಸಂಸ್ಥೆಯವರು ಕೆಇಆರ್‌ಸಿಗೆ ಅರ್ಜಿ ಹಾಕಿದ್ದಾರೆ. ಕೆಇಆರ್‌ಸಿಯವರು ಎಸ್ಕಾಂಗಳಿಗೆ ತಿಳಿಸಿದ್ದು, ಸರ್ಕಾರದ ತೀರ್ಮಾನವನ್ನು ಎಸ್ಕಾಂಗಳಿಗೆ ತಿಳಿಸಲಾಗಿದೆ. ಈ ಬಗ್ಗೆ ಕೆಇಆರ್‌ಸಿ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದರು.
‘ಪ್ರಜಾಸೇವೆ’ಗೆ ಉಸ್ತುವಾರಿ ಸಚಿವರ ಭೇಟಿ ಕಡ್ಡಾಯ’
‘ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ತಿಂಗಳಿಗೆ ಎರಡು ದಿನ (ಮೊದಲ ಹಾಗೂ ಮೂರನೇ ಶನಿವಾರ) ತಮ್ಮ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ‘ಪ್ರಜಾಸೇವೆ’ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದು ಮುಖ್ಯಮಂತ್ರಿ ತಿಳಿಸಿದರು.
‘ಈ ಅಭಿಯಾನ ನಡೆಯುವ ಜಾಗದಲ್ಲಿ ಎಲ್ಲ ಇಲಾಖೆಗಳ ಶಾಖೆಗಳನ್ನು ತೆರೆಯಲಾಗುವುದು. ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳು ಅಲ್ಲಿ ಉಪಸ್ಥಿತರಿರಬೇಕು. ಕ್ಷೇತ್ರದ ಜನರಿಗೆ ಈ ಸಭೆಯ ಕುರಿತು ಮೊದಲೇ ಮಾಹಿತಿ ನೀಡಲಾಗುವುದು. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗುವಂತಾಗಬೇಕು. ನಾನು ಕೂಡ ಕೆಲವು ತಾಲ್ಲೂಕುಗಳಿಗೆ ಭೇಟಿ ನೀಡುತ್ತೇನೆ’ ಎಂದರು.
‘ದೂರು, ಸಮಸ್ಯೆಗಳನ್ನು, ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜಿಲ್ಲಾ ಸಚಿವರಿಗೆ ತಲುಪಿಸುವ ಕೆಲಸವನ್ನು ‘ಪ್ರಜಾಸೇವೆ’ ಇಲಾಖೆ ಮಾಡಲಿದೆ. ಇದಕ್ಕೆ ಪ್ರತ್ಯೇಕ ಸಚಿವಾಲಯ ರೂಪಿಸುತ್ತಿದ್ದು, ಅದಕ್ಕೆ ಸಚಿವರನ್ನು ನೇಮಿಸಲಾಗುವುದು. ಐಎಎಸ್ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನಿಯೋಜಿಸಿ, ಅಗತ್ಯ
ಅಧಿಕಾರಿಗಳನ್ನು ನೀಡಲು ತೀರ್ಮಾನಿಸಲಾಗಿದೆ. ಎಲ್ಲೇ ಪ್ರತಿಭಟನೆ ನಡೆದರೂ ಅವರ ಅರ್ಜಿ ಸ್ವೀಕರಿಸಿ ಕಾನೂನುಬದ್ಧವಾಗಿ ಸಹಾಯ ಮಾಡಲು ಅವಕಾಶವಿದ್ದರೆ, ಆ ಕೆಲಸವನ್ನು ಮಾಡುತ್ತೇವೆ’ ಎಂದೂ ಮುಖ್ಯಮಂತ್ರಿ ಹೇಳಿದರು.
ಭೀಕರ ಬರಗಾಲದ ಮುನ್ಸೂಚನೆ: ನೀರಿಲ್ಲ, ಬೆಳೆ ಬೆಳೆಯಬೇಡಿ ಎಂದ ಸಿ.ಎಂ ಡಿ.ಕೆ ಶಿವಕುಮಾರ್
WhatsApp Group
Join Now