ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಶಾಲಾ ಬಸ್ ಕೇವಲ ಶಾಲಾ ಆವರಣದಲ್ಲಿದ್ದಾಗ ಮಾತ್ರವಲ್ಲ, ಮಗು ಬಸ್ ಹತ್ತಿದಾಗಿನಿಂದ ಹಿಡಿದು ಸಂಜೆ ಸುರಕ್ಷಿತವಾಗಿ ಪೋಷಕರ ಕೈ ಸೇರುವವರೆಗೂ ಮಗುವಿನ ಸಂಪೂರ್ಣ ರಕ್ಷಣೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಶಾಲಾ ಬಸ್ನಲ್ಲಿ ನಡೆದ ಅಪಘಾತವೊಂದರಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಶಾಲಾ ಮಂಡಳಿಯ ಅರ್ಜಿ ವಜಾಗೊಳಿಸಿದ ನ್ಯಾಯಪೀಠ
ಮಂಡ್ಯ ಜಿಲ್ಲೆಯ ಮದ್ದೂರಿನ ‘ದಿವ್ಯಜ್ಯೋತಿ ಶಾಲಾ ಆಡಳಿತ ಮಂಡಳಿ’ ತಮಗೆ ದಾಖಲಾಗಿದ್ದ ಎಫ್ಐಆರ್ (FIR) ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕ್ರಿಮಿನಲ್ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶಾಲೆಯ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು. ಬೆಳೆಯುವ ವಯಸ್ಸಿನ ಪುಟ್ಟ ಮಗುವೊಂದು ತನ್ನ ಇಡೀ ಜೀವನವನ್ನು ದೃಷ್ಟಿಹೀನತೆಯ ಶಾಪದೊಂದಿಗೆ ಕಳೆಯುವಂತಾಗಿರುವ ಈ ಗಂಭೀರ ಪರಿಸ್ಥಿತಿಯಲ್ಲಿ, ತನಿಖೆಯ ಆರಂಭಿಕ ಹಂತದಲ್ಲೇ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಆದೇಶಿಸಿದೆ.
ಮಕ್ಕಳ ಸುರಕ್ಷತೆ ಕಡ್ಡಾಯ ಶಾಸನಬದ್ಧ ಜವಾಬ್ದಾರಿ
ವಿಚಾರಣೆ ವೇಳೆ ಕಠಿಣ ನಿಲುವು ತಳೆದ ನ್ಯಾಯಾಧೀಶರು, “ಶಾಲಾ ಬಸ್ಗಳಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ದಾಕ್ಷಿಣ್ಯ ಅಥವಾ ಅನುಕೂಲದ ವಿಷಯವಲ್ಲ. ಇದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು 2018’ ರ ಅಡಿ ಪ್ರತಿಯೊಂದು ಶಾಲೆಯೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಶಾಸನಬದ್ಧ ಜವಾಬ್ದಾರಿಯಾಗಿದೆ,” ಎಂದು ನೆನಪಿಸಿದರು. ಮಗು ಬಸ್ ಹತ್ತಿದ ಮೇಲೆ ಕೊನೆಯ ಸ್ಟಾಪ್ ಬರುವವರೆಗೂ ಶಾಲಾ ಮಂಡಳಿ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ತನಿಖೆಯಿಂದ ಹೊರಬರಬೇಕಿದೆ ಅಸಲಿ ಸತ್ಯ
ಘಟನೆ ನಡೆದ ಸಂದರ್ಭದಲ್ಲಿ ಶಾಲಾ ಬಸ್ನ ಒಳಗಿನ ನಿಯಮ ಉಲ್ಲಂಘನೆಗಳ ಬಗ್ಗೆ ನ್ಯಾಯಾಲಯ ಹಲವು ಪ್ರಶ್ನೆಗಳನ್ನು ಎತ್ತಿದೆ. “ಘಟನೆ ನಡೆದಾಗ ಬಸ್ನಲ್ಲಿ ನಿಜಕ್ಕೂ ಅಟೆಂಡರ್ ಇದ್ದರೇ? ಬಸ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕೇವಲ ‘ಅಲಂಕಾರಿಕ ವಸ್ತು’ ಆಗಿತ್ತೇ ಅಥವಾ ಚಾಲನೆಯಲ್ಲಿತ್ತೇ? ಪಟಾಕಿಯಂತಹ ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳನ್ನು ಸಣ್ಣ ಮಕ್ಕಳು ಬಸ್ನ ಒಳಗೆ ತರಲು ಹೇಗೆ ಸಾಧ್ಯವಾಯಿತು?” ಎಂದು ಪ್ರಶ್ನಿಸಿದ ನ್ಯಾಯಪೀಠ, ಈ ಎಲ್ಲಾ ಗಂಭೀರ ಪ್ರಶ್ನೆಗಳಿಗೆ ಪೂರ್ಣ ಪ್ರಮಾಣದ ಪೊಲೀಸ್ ತನಿಖೆಯಿಂದಲೇ ಉತ್ತರ ಸಿಗಬೇಕಾಗಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿಸ್ತಾರ ಎಷ್ಟಿದೆ ಎಂಬುದು ತನಿಖೆಯ ನಂತರವಷ್ಟೇ ಸಾಬೀತಾಗಬೇಕು ಎಂದಿತು.
ಘಟನೆಯ ಹಿನ್ನೆಲೆ ಏನು?
ಈ ದುರದೃಷ್ಟಕರ ಘಟನೆ ನಡೆದಿದ್ದು 2025ರ ಆಗಸ್ಟ್ 1ರಂದು. ಮದ್ದೂರಿನ ದಿವ್ಯಜ್ಯೋತಿ ಶಾಲೆಯ ಬಸ್ನಲ್ಲಿ ಶಾಲಾ ಅವಧಿಯ ಮುಕ್ತಾಯದ ನಂತರ ಮಕ್ಕಳು ಮನೆಗೆ ಮರಳುತ್ತಿದ್ದರು. ಈ ವೇಳೆ ಬಸ್ನಲ್ಲಿದ್ದ ಇತರ ವಿದ್ಯಾರ್ಥಿಗಳು ತಂದಿದ್ದ ಬಣ್ಣದ ಕಾಗದ ಹಾಗೂ ಪಟಾಕಿ ಮಾದರಿಯ ಸಿಡಿಮದ್ದೊಂದು ದಿಢೀರನೆ ಸಿಡಿದಿದೆ. ಈ ಸ್ಫೋಟದ ತೀವ್ರತೆಗೆ 4ನೇ ತರಗತಿಯ ಅಮಾಯಕ ಬಾಲಕನ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ನೀಡಿದ ಹೊರಾಗಿಯೂ ಬಾಲಕನ ಒಂದು ಕಣ್ಣಿನ ದೃಷ್ಟಿ ಮರಳಲಿಲ್ಲ. ವೈದ್ಯರು ಆ ಮಗುವಿಗೆ ಶೇಕಡಾ 40ರಷ್ಟು ಅಂಗವೈಕಲ್ಯ ಉಂಟಾಗಿದೆ ಎಂದು ದೃಢೀಕರಿಸಿದ್ದರು.
ಶಾಲಾ ಪರ ವಕೀಲರ ವಾದವೇನಿತ್ತು?
ಮಗುವಿನ ಪೋಷಕರು ಶಾಲೆಯ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಶಾಲಾ ಆಡಳಿತ ಮಂಡಳಿಯ ಪರ ವಕೀಲರು, “ಇದು ಶಾಲಾ ಅವಧಿ ಮುಗಿದ ನಂತರ ಬಸ್ನಲ್ಲಿ ಮತ್ತೊಂದು ಮಗು ಮಾಡಿದ ಆಕಸ್ಮಿಕ ಕೃತ್ಯವಾಗಿದೆ. ಇದಕ್ಕೆ ಶಾಲಾ ಆಡಳಿತ ಮಂಡಳಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಶಾಲಾ ನಿಯಮಾವಳಿಗಳ ಪ್ರಕಾರ ಬಸ್ನಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಅಟೆಂಡರ್ ಇಬ್ಬರನ್ನೂ ನಿಯೋಜಿಸಲಾಗಿತ್ತು. ಹೀಗಾಗಿ ಶಾಲೆಯ ಮೇಲಿನ ಎಫ್ಐಆರ್ ರದ್ದುಪಡಿಸಬೇಕು,” ಎಂದು ವಾದಿಸಿದ್ದರು. ಆದರೆ, ಹೈಕೋರ್ಟ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ತನಿಖೆ ಮುಂದುವರಿಸಲು ಹಸಿರು ನಿಶಾನೆ ನೀಡಿದೆ.
ಶಾಲಾ ಬಸ್ನಲ್ಲಿ ಮಕ್ಕಳು ಮನೆ ತಲುಪುವವರೆಗೂ ಶಾಲೆಯದ್ದೇ ಜವಾಬ್ದಾರಿ : ಹೈಕೋರ್ಟ್ ಮಹತ್ವದ ಆದೇಶ!
WhatsApp Group
Join Now