ಬೈಕ್‌ನಿಂದ ರಸ್ತೆಗೆ ಬಿದ್ದ ಇಬ್ಬರ ಮೇಲೆ ಹರಿದ ಸಾರಿಗೆ ಬಸ್ – ಯುವಕರು ಸ್ಥಳದಲ್ಲೇ ಸಾ*ವು!

Spread the love

ಕ್ಷಣ ಮಾತ್ರದಲ್ಲಿ ನಡೆದ ಸರಣಿ ಅಪಘಾತವೊಂದು ಇಬ್ಬರ ಜೀವ ಬಲಿ ಪಡೆದಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಕಡೂರು ತಾಲೂಕಿನ ಹಳೇಹಟ್ಟಿ ಗೇಟ್ ಬಳಿ ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಬೆನ್ನಲ್ಲೇ ರಸ್ತೆಗೆ ಬಿದ್ದ ಸವಾರರ ಮೇಲೆ ಸರ್ಕಾರಿ ಬಸ್ ಹರಿದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಡೂರು ಕಡೆಯಿಂದ ಚಿಕ್ಕಮಗಳೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಎರಡೂ ಬೈಕ್‌ಗಳ ಸವಾರರು ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಸರ್ಕಾರಿ ಬಸ್ ಸವಾರರ ಮೇಲೆಯೇ ಹರಿದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರಿಬ್ಬರೂ ರಾಜಸ್ಥಾನ ಮೂಲದವರು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಆದರೆ ಅವರ ಹೆಸರು, ವಿಳಾಸ ಸೇರಿದಂತೆ ಸಂಪೂರ್ಣ ವಿವರಗಳು ಇನ್ನೂ ಪೊಲೀಸರಿಗೆ ಲಭ್ಯವಾಗಿಲ್ಲ. ಮೃತರ ಗುರುತು ಪತ್ತೆಗಾಗಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇನ್ನು ಅಪಘಾತದಲ್ಲಿ ಮತ್ತೊಂದು ಬೈಕ್‌ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಕಡೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸಖರಾಯಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಇತರ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

WhatsApp Group Join Now

Spread the love

Leave a Reply