ಹೃದಯವಿದ್ರಾವಕ ಘಟನೆ : ರೈಲಿನ ತುರ್ತು ಕಿಟಕಿಯಿಂದ ಬಿದ್ದು 9 ತಿಂಗಳ ಮಗು ಸಾ*ವು.!

Spread the love

ಉತ್ತರ ಪ್ರದೇಶದ ಫತೇಪುರ ಬಳಿ ಚಲಿಸುತ್ತಿದ್ದ ರೈಲಿನ ತುರ್ತು ಕಿಟಕಿಯಿಂದ (ಎಮರ್ಜೆನ್ಸಿ ವಿಂಡೋ) ಕೆಳಗೆ ಬಿದ್ದು 9 ತಿಂಗಳ ಹಸುಗೂಸು ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಮಧ್ಯಾಹ್ನ ಫೈಜುಲ್ಲಾಪುರ ರೈಲ್ವೆ ನಿಲ್ದಾಣದ ಸಮೀಪದ ಹಳಿಯ ಪಕ್ಕದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ಮೃತ ಮಗುವನ್ನು ಕನಿಷ್ಕ್ ಎಂದು ಗುರುತಿಸಲಾಗಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯ ಸಲೋನಿ ಗ್ರಾಮದ ನಿವಾಸಿ ಮೋಹನ್, ತಮ್ಮ ಪತ್ನಿ ಕಾಜಲ್ ಮತ್ತು 9 ತಿಂಗಳ ಮಗುವಿನೊಂದಿಗೆ ದೆಹಲಿಯಿಂದ ಬಿಹಾರಕ್ಕೆ ಸೀಮಾಂಚಲ್ ಎಕ್ಸ್‌ಪ್ರೆಸ್‌ನ ಎಸ್‌-1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು.

ಕಾನ್ಪುರ ಸೆಂಟ್ರಲ್ ನಿಲ್ದಾಣದಿಂದ ರೈಲು ಹೊರಟ ನಂತರ, ಬೆಳಗಿನ ಜಾವ ಸುಮಾರು 3:15 ರ ಸುಮಾರಿಗೆ ಕಾಜಲ್ ಮಗುವನ್ನು ತಮ್ಮ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರೆಗೆ ಜಾರಿದ್ದರು. ಅದೇ ಸಮಯದಲ್ಲಿ ಪತಿ ಮೋಹನ್ ರೈಲಿನ ಬಾಗಿಲಿನ ಬಳಿ ಹೋಗಿದ್ದರು. ಸುಮಾರು 4:17 ಕ್ಕೆ ಮೋಹನ್ ಸೀಟಿನ ಬಳಿ ಮರಳಿದಾಗ ಪತ್ನಿ ಒಬ್ಬರೇ ಮಲಗಿರುವುದು ಕಂಡುಬಂದಿದ್ದು, ಮಗು ನಾಪತ್ತೆಯಾಗಿತ್ತು. ಪತ್ನಿಯನ್ನು ಎಬ್ಬಿಸಿ ವಿಚಾರಿಸಿದಾಗ ಮಗು ಪಕ್ಕದಲ್ಲೇ ಇತ್ತು ಎಂದು ತಿಳಿಸಿದ್ದಾರೆ. ಆದರೆ, ಸೀಟಿನ ಎದುರಿನಲ್ಲಿದ್ದ ತುರ್ತು ಕಿಟಕಿ ತೆರೆದುಕೊಂಡಿರುವುದು ಕಂಡುಬಂದಿದೆ. ನಿದ್ರೆಯ ಮಂಪರಿನಲ್ಲಿ ಮಗು ಉರುಳಿಕೊಂಡು ತೆರೆದಿದ್ದ ಕಿಟಕಿಯ ಮೂಲಕ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ದಂಪತಿ ಪ್ರಯಾಗ್‌ರಾಜ್‌ನಲ್ಲಿ ರೈಲಿನಿಂದ ಕೆಳಕ್ಕಿಳಿದು ಜಿಆರ್‌ಪಿಗೆ ದೂರು ನೀಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಜಿಆರ್‌ಪಿ, ಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ಕಾನ್ಪುರದಿಂದ ಪ್ರಯಾಗ್‌ರಾಜ್ ನಡುವೆ ತೀವ್ರ ಶೋಧ ಕಾರ್ಯ ನಡೆಸಿತು. ಶೋಧದ ವೇಳೆ ಫೈಜುಲ್ಲಾಪುರ ನಿಲ್ದಾಣದ ಬಳಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕರುಳಕುಡಿಯ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

WhatsApp Group Join Now

Spread the love

Leave a Reply