ಇಲ್ಲಿನ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ 18ನೇ ಬ್ರಿಕ್ಸ್ ಶೃಂಗಸಭೆಯ (BRICS Summit ) ಗಾಲಾ ಡಿನ್ನರ್ನಲ್ಲಿ ಜಾಗತಿಕ ನಾಯಕರಿಗೆ ಸಂಪೂರ್ಣ ಸಸ್ಯಾಹಾರಿ (Vegetarian Menu) ಊಟ ಬಡಿಸಿರುವುದು ದೇಶದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಜಾಗತಿಕ ನಾಯಕರಿಗೆ ಸಸ್ಯಾಹಾರಿ ಭೋಜನ ನೀಡಿದ ಕ್ರಮವನ್ನು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ದೇಶದಲ್ಲಿ ಶೇ. 80ರಷ್ಟು ಮಂದಿ ಮಾಂಸಾಹಾರಿಗಳಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ‘ಎಕ್ಸ್’ ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ನಲ್ಲೇನಿದೆ.?
ಭಾರತೀಯ ಮಾಂಸಾಹಾರಿ ಆಹಾರವು ಅತ್ಯಂತ ರುಚಿಕರವಾಗಿದ್ದು, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ತಯಾರಿಸುವ ಛೋಲೆ ಭಟೂರೆ ಕೂಡ ಅತ್ಯದ್ಭುತ ರುಚಿ ನೀಡುತ್ತದೆ ಎಂದು ಬರೆದುಕೊಂಡಿರುವ ರಾಹುಲ್, ಛೋಲೆ ಭಟೂರೆಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಆಹಾರ ವೈವಿಧ್ಯತೆಯನ್ನು ಎತ್ತಿಹಿಡಿದಿದ್ದಾರೆ.
ಬ್ರಿಕ್ಸ್ ಗಾಲಾ ಡಿನ್ನರ್ ಮೆನುವಿನ ವಿಶೇಷತೆ ಏನು?
ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಈ ಭವ್ಯ ಔತಣಕೂಟದಲ್ಲಿ ಭಾರತದ ಸಾಂಪ್ರದಾಯಿಕ ಸಿರಿಧಾನ್ಯ (‘ಶ್ರೀ ಅನ್ನ’) ಹಾಗೂ ಸಸ್ಯಾಹಾರಿ ಖಾದ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು. ಮೆನುವಿನಲ್ಲಿ ಗುಜರಾತಿ ಖಾಂಡ್ವಿ, ಪನೀರ್ ಲಬಾಬ್ದಾರ್, ಕಾಶ್ಮೀರದ ಗುಚ್ಚಿ ಮಾರ್ಮಿಕ್, ರಾಗಿ ಪುಲಾವ್, ಮಶ್ರೂಮ್ ಗಲೋಟಿ ಕಬಾಬ್ ಮತ್ತು ಬಿಸಿ ಜಿಲೇಬಿಗಳನ್ನು ನಾಯಕರಿಗೆ ಬಡಿಸಲಾಗಿತ್ತು. ಭಾರತದ ಶ್ರೀಮಂತ ಪಾಕಪದ್ಧತಿ ಹಾಗೂ ವಿಶ್ವಸಂಸ್ಥೆ ಪ್ರೋತ್ಸಾಹಿಸುವ ಪರಿಸರ ಸ್ನೇಹಿ ಸಿರಿಧಾನ್ಯಗಳ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸಲು ಈ ಸಸ್ಯಾಹಾರಿ ಮೆನು ರೂಪಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸರ್ಕಾರಿ ಸಮೀಕ್ಷೆಯ ಅಂಕಿ-ಅಂಶಗಳು
ರಾಹುಲ್ ಗಾಂಧಿ ಉಲ್ಲೇಖಿಸಿದ ಶೇ. 80ರ ಅಂಕಿ-ಅಂಶಕ್ಕೆ ನೇರ ಅಧಿಕೃತ ಮೂಲವಿಲ್ಲದಿದ್ದರೂ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ 15ರಿಂದ 49 ವರ್ಷ ವಯಸ್ಸಿನ ಪುರುಷರಲ್ಲಿ ಶೇ. 83.4 ಹಾಗೂ ಮಹಿಳೆಯರಲ್ಲಿ ಶೇ. 70.6ರಷ್ಟು ಮಂದಿ ನಿಯಮಿತವಾಗಿ ಅಥವಾ ಸಾಂದರ್ಭಿಕವಾಗಿ ಮಾಂಸ, ಮೀನು ಅಥವಾ ಕೋಳಿ ಸೇವಿಸುವುದಾಗಿ ತಿಳಿದುಬಂದಿದೆ. ಈ ವಿಚಾರವಾಗಿ ಆನ್ಲೈನ್ನಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ.
ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು
ರಾಹುಲ್ ಗಾಂಧಿ ಅವರ ಪೋಸ್ಟ್ ಬೆನ್ನಲ್ಲೇ ಎಂಟ್ರಿ ಕೊಟ್ಟ ಕೇಂದ್ರ ಸಚಿವ ಕಿರಣ್ ರಿಜಿಜು, ಬ್ರಿಕ್ಸ್ ನಾಯಕರಿಗೆ ನೀಡಿದ ಆಹಾರದ ಮೆನು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಆಹಾರ ಪದ್ಧತಿಯು ಅತ್ಯುತ್ತಮ ರುಚಿ, ಪೌಷ್ಟಿಕತೆ ಹಾಗೂ ವೈವಿಧ್ಯಮಯ ಪ್ರಾದೇಶಿಕ ಪರಂಪರೆಯನ್ನು ಹೊಂದಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.