‘ರಾಜ್ಯದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡಿಸಲಾಗಿದೆ ಹಾಗೂ ಕೇಂದ್ರಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆಸಿ ಅವ್ಯವಹಾರ ನಡೆಸಲಾಗಿದೆ’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಶೇ 94.1ರಷ್ಟು ಫಲಿತಾಂಶ ಬಂದಿದೆ.
ಹೋದ ವರ್ಷ ಶೇ 80.4ರಷ್ಟಿತ್ತು. ಒಮ್ಮೆಲೇ ಭಾರಿ ಜಿಗಿತ ಕಂಡಿದೆ. ಹೀಗಾಗಿ, ಪರೀಕ್ಷಾ ವಿಧಾನ, ಮೌಲ್ಯಮಾಪನದ ಬಗ್ಗೆ ಅನುಮಾನಗಳಿವೆ. ಕೆಲವೇ ಸೋಮಾರಿ ಶಿಕ್ಷಕರು ಮಾತ್ರ ಇಂತಹ ಫಲಿತಾಂಶವನ್ನು ಸ್ವಾಗತಿಸುತ್ತಾರಷ್ಟೆ’ ಎಂದು ಹೇಳಿದರು.
‘ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ. ಎಲ್ಲರೂ ಪಾಸಾಗಬೇಕೆಂದು ಕಸರತ್ತು ನಡೆಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅವರ ಕಥೆ ಏನು? ಪಿಯು ಹಂತದಲ್ಲಿ ಶಿಕ್ಷಣ ಮುಂದುವರಿಸುವವರ ಪ್ರಮಾಣ ಕಡಿಮೆ ಆಗಲಿದೆ. ಇದು ಆಘಾತಕಾರಿಯಾದುದು’ ಎಂದು ಕಳವಳ ವ್ಯಕ್ತಪಡಿಸಿದರು.
’20ಕ್ಕೆ 20 ಆಂತರಿಕ ಅಂಕಗಳನ್ನು ಎಲ್ಲರಿಗೂ ಕೊಡಲಾಗಿದೆ. ಪಾಸಾಗಲು ಇನ್ನು ಬೇಕಾದದು 13 ಅಂಕ ಮಾತ್ರ. ಅದನ್ನೂ ಕಾಪಿ (ನಕಲು) ಮಾಡಿಸಿದ್ದಾರೆ. ಇದು ಬಹಳ ನೋವಿನ ಸಂಗತಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ದೊಡ್ಡ ಸಾಧನೆ ಮಾಡಿದ್ದಾಗಿ ಕೊಚ್ಚಿಕೊಳ್ಳುತ್ತಿದೆ’ ಎಂದು ಟೀಕಿಸಿದರು.
‘ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಈ ಕೊರತೆ ಜಾಸ್ತಿ ಇದೆ. ಹೀಗಿದ್ದರೂ ಶೇ 94ರಷ್ಟು ಫಲಿತಾಂಶ ಬಂದಿದ್ದಾರೂ ಹೇಗೆ? ಮಾತೃ ಭಾಷೆ ಕನ್ನಡದಲ್ಲೇ ಬಹಳಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರಲ್ಲಾ ಏಕೆ? ಇದು ಯಾವ ರೀತಿಯ ಸಾಧನೆ? ಹಟಕ್ಕೆ ಬಿದ್ದು ಪಾಸ್ ಮಾಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಬೋಧನೆ, ಶಿಕ್ಷಕರ ನೇಮಕಾತಿ, ಶಾಲೆಗಳಿಗೆ ಸೌಲಭ್ಯ ಒದಗಿಸುವುದರಲ್ಲಿ ಹಟ ಇರಬೇಕಾಗಿತ್ತು’ ಎಂದರು.
‘ಶಿಕ್ಷಣ ಕ್ಷೇತ್ರದ ಬಲವರ್ಧನೆಗೆಂದೇ ಎಡಿಬಿಯಿಂದ ₹ 2ಸಾವಿರ ಕೋಟಿ ಸಾಲವನ್ನು ಸರ್ಕಾರ ಮಾಡಿದೆ. ಅದರಲ್ಲಿ ಕಿಕ್ ಬ್ಯಾಕ್ ಪಡೆಯಲಾಗುತ್ತಿದೆ. ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ನಿಯೋಜನೆಗೆ ₹ 50ಸಾವಿರ ಪಡೆಯುತ್ತಿದ್ದಾರೆ’ ಎಂದು ದೂರಿದರು.
‘ರಾಜ್ಯವನ್ನು ಅಡವಿಟ್ಟ ಸಾಲಗಾರ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಟೀಕಿಸಿದರು.
‘ಬಹಳಷ್ಟು ಶಿಕ್ಷಕರ ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಇಷ್ಟೊಂದು ಫಲಿತಾಂಶ ಬಂದಿದ್ದಾದರೂ ಹೇಗೆ? ಮಕ್ಕಳಲ್ಲಿನ ಓದುವ ಉತ್ಸಾಹವನ್ನೇ ಈ ಸರ್ಕಾರ ಕಿತ್ತುಕೊಂಡಿದೆ. ಸಿದ್ದರಾಮನಹುಂಡಿಯಲ್ಲೇ ಇರುವ ಸಿದ್ದರಾಮಯ್ಯ ಇನ್ನಾದರೂ ಹೊರಬರಲಿ. ವಸ್ತುಸ್ಥಿತಿ ತಿಳಿದುಕೊಂಡು ವ್ಯವಸ್ಥೆಯನ್ನು ಬದಲಾಯಿಸಲಿ’ ಎಂದು ಹೇಳಿದರು.
‘ಹಿಂದಿ ವಿಷಯದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಆದರೂ, ಸರ್ಕಾರ ಜನ, ಪ್ರಜಾತಂತ್ರ ಹಾಗೂ ಶಿಕ್ಷಣ ವಿರೋಧಿಯಾದ ಕೆಲಸವನ್ನೇ ಮುಂದುವರಿಸುತ್ತಿದೆ. ಇದೆಲ್ಲವನ್ನೂ ನೋಡಿದರೆ, ಶಿಕ್ಷಣ ಸಚಿವನಾಗಿದ್ದ ನನಗೆ ನೋವಾಗುತ್ತಿದೆ’ ಎಂದರು.
‘ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಶೋಷಿತ ಸಮುದಾಯಗಳಿಗೆ ಮಾರಕವಾಗಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿಗಳಿಗೆ ದೊಡ್ಡ ಅನ್ಯಾಯ ಮಾಡಲಾಗಿದೆ. ಇದು ಸಮಾನತೆಯೇ, ಸಾಮಾಜಿಕ ನ್ಯಾಯವೇ? ಸಿದ್ದರಾಮಯ್ಯ ಸಮಾಜವಾದಿ ಎಂದು ಬೊಗಳೆಬಿಡುತ್ತಾರಷ್ಟೆ’ ಎಂದು ಟೀಕಿಸಿದರು.
‘ಶಿಕ್ಷಕರೇ ಇಲ್ಲ, SSLCಯಲ್ಲಿ 94% ಬಂದಿದ್ದು ಹೇಗೆ? ದೊಡ್ಡ ಗೋಲ್‌ಮಾಲ್ ನಡೆದಿದೆ’ : ಎಚ್.ವಿಶ್ವನಾಥ್
WhatsApp Group
Join Now