ಸಾವು ಬದುಕಿನ ನಡುವೆ ಹೋರಾಡುವ ಸಂದರ್ಭದಲ್ಲೂ ಮನುಷ್ಯ ಎಷ್ಟರಮಟ್ಟಿಗೆ ಧೈರ್ಯ ತಾಳಬಲ್ಲ ಎಂಬುದಕ್ಕೆ ಮುಂಬೈನಲ್ಲಿ (Mumbai) ನಡೆದ ಈ ಘಟನೆಯೇ ಸಾಕ್ಷಿ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳವೊಂದು (Quarrel) ವಿಕೋಪಕ್ಕೆ ಹೋಗಿ, ಯುವಕನೊಬ್ಬನ ತಲೆಗೆ ಮಚ್ಚು (Machete) ಬಲವಾಗಿ ಹೊಕ್ಕಿದ್ದರೂ, ಆತ ಅದೇ ಸ್ಥಿತಿಯಲ್ಲಿ ನಡೆದುಕೊಂಡೇ ಆಸ್ಪತ್ರೆಗೆ ಬಂದಿರುವ ಘಟನೆ (Shocking) ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮುಂಬೈನ ಮಂಖುರ್ದ್ ನಿವಾಸಿ, 27 ವರ್ಷದ ರೋಹಿತ್ ಪವಾರ್ ತಲೆಗೆ ಮಚ್ಚು ಹೊಕ್ಕಿದ್ದರೂ ತಾನಾಗಿಯೇ ಆಸ್ಪತ್ರೆಗೆ ನಡೆದುಕೊಂಡು ಬಂದ ಯುವಕ. ಕಳೆದ ಶುಕ್ರವಾರ ತಡರಾತ್ರಿ ಸ್ನೇಹಿತರ ನಡುವೆ ನಡೆದ ವಾಗ್ವಾದವು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಆತನ ಮೇಲೆ ಮೂವರು ದಾಳಿ ಮಾಡಿದ್ದಲ್ಲದೆ, ಭೀಕರವಾಗಿ ಮಚ್ಚಿನಿಂದ ತಲೆಗೆ ಹೊಡೆದಿದ್ದರು. ಮಚ್ಚು ಎಷ್ಟು ಆಳವಾಗಿ ಇಳಿದಿತ್ತೆಂದರೆ ಅದು ತಲೆಬುರುಡೆಯ ಎಡಭಾಗದಲ್ಲಿ ಭದ್ರವಾಗಿ ಸಿಲುಕಿಕೊಂಡಿತ್ತು.
ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಯಾರು ಕೂಡ ಪ್ರಜ್ಞೆ ತಪ್ಪಿ ಬೀಳುವುದು ಸಹಜ. ಆದರೆ ರೋಹಿತ್ ಮಾತ್ರ ಅಸಾಧಾರಣ ಧೈರ್ಯ ತೋರಿದ್ದಾನೆ. ತಲೆಗೆ ಮಚ್ಚು ಹೊಕ್ಕಿದ್ದರೂ ಗಾಬರಿಯಾಗದ ಆತ, ತನ್ನ ಸ್ನೇಹಿತರ ಜೊತೆ ಮೋಟಾರ್ ಸೈಕಲ್ ಏರಿ ಸಿಯೋನ ಆಸ್ಪತ್ರೆಗೆ ತಲುಪಿದ್ದಾನೆ. ಆಸ್ಪತ್ರೆಯ ಆವರಣದಲ್ಲಿ ಆತ ಮಚ್ಚು ತಲೆಯಲ್ಲಿರುವಾಗಲೇ ನಡೆದಾಡುತ್ತಾ, ಸ್ನೇಹಿತರೊಡನೆ ಮಾತನಾಡುತ್ತಿದ್ದುದನ್ನು ಕಂಡು ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ದಂಗಾಗಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ರೋಹಿತ್‌ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ಸಾಮಾನ್ಯವಾಗಿ ಕೇವಲ ಮೂರು ನಿಮಿಷಗಳಲ್ಲಿ ಮುಗಿಯುವ ಸಿಟಿ ಸ್ಕ್ಯಾನಿಂಗ್ ಪ್ರಕ್ರಿಯೆಯು ಈ ಪ್ರಕರಣದಲ್ಲಿ ಸುಮಾರು 45 ನಿಮಿಷಗಳ ಕಾಲ ತೆಗೆದುಕೊಂಡಿತು. ತಲೆಬುರುಡೆಯೊಳಗೆ ಮಚ್ಚು ಆಳವಾಗಿ ಇಳಿದಿದ್ದರಿಂದ ಬಹಳ ಎಚ್ಚರಿಕೆಯಿಂದ ಸ್ಕ್ಯಾನಿಂಗ್ ಮತ್ತು ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇನ್ನು ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಾಳಿ ನಡೆಸಿದ ಮೂವರು ಅಪ್ರಾಪ್ತ ಹುಡುಗರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಡೊಂಗ್ರಿಯಲ್ಲಿರುವ ಬಾಲಾಪರಾಧಿಗಳ ಕೇಂದ್ರಕ್ಕೆ ರವಾನಿಸಲಾಗಿದೆ. ರಕ್ತಸಿಕ್ತವಾಗಿ ಮಚ್ಚು ತಲೆಗೆ ಹೊಕ್ಕಿದ್ದರೂ ಎದೆಗುಂದದೆ ಆಸ್ಪತ್ರೆಗೆ ಬಂದ ರೋಹಿತ್‌ನ ಧೈರ್ಯದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ತಲೆಗೆ ಚುಚ್ಚಿದ ತಲವಾರ್ ಜೊತೆಗೇ ಆಸ್ಪತ್ರೆಗೆ ನಡೆದು ಬಂದ ಯುವಕ – ವೈದ್ಯರೇ ಶಾಕ್!
WhatsApp Group
Join Now