ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಅಮಾನವೀಯ ಹಾಗೂ ಆಘಾತಕಾರಿ (Shocking) ಘಟನೆಯೊಂದು ಬೆಳಕಿಗೆ ಬಂದಿದೆ. ಬಾಡಿಗೆ ಮನೆಯಲ್ಲಿ ಸ್ನಾನ (Bath) ಮಾಡುತ್ತಿದ್ದ 23 ವರ್ಷದ ಯುವತಿಯ ಖಾಸಗಿ ವಿಡಿಯೋವನ್ನು (Private Video) ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂತ್ರಸ್ತ ಯುವತಿಯು ಕಳೆದ ಒಂಬತ್ತು ತಿಂಗಳ ಹಿಂದಷ್ಟೇ ಗರುಡಾಚಾರ್ ಪಾಳ್ಯಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಎಂದಿನಂತೆ ಬುಧವಾರ ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಅವರು ಸ್ನಾನ ಮಾಡುತ್ತಿದ್ದಾಗ, ಕಿಟಕಿಯ ಬಳಿ ಏನೋ ಚಲನವಲನವಾದಂತೆ ಭಾಸವಾಗಿದೆ.
ತಕ್ಷಣ ಗಮನಿಸಿದಾಗ ಪಕ್ಕದ ಕಟ್ಟಡದಿಂದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಫೋನ್ ಹಿಡಿದು ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಕಂಡು ಬೆಚ್ಚಿಬಿದ್ದ ಯುವತಿ ಕೂಡಲೇ ಕಿರುಚಿಕೊಂಡಿದ್ದಾರೆ. ಅಷ್ಟರಲ್ಲೇ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಘಟನೆಯಿಂದ ಯುವತಿಯು ತೀವ್ರವಾಗಿ ನೊಂದಿದ್ದು, ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರೀಕರಿಸಲಾದ ವಿಡಿಯೋವನ್ನು ಆರೋಪಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ. ಸುರಕ್ಷಿತವಾಗಿರಬೇಕಾದ ಮನೆಯಲ್ಲೇ ಇಂತಹ ಘಟನೆ ನಡೆದಿರುವುದು ಅಲ್ಲಿನ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.
ಯುವತಿ ನೀಡಿದ ದೂರಿನನ್ವಯ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು, ಪಕ್ಕದ ಕಟ್ಟಡದಲ್ಲಿ ಇರುವವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ತೀವ್ರ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಟಾಯ್ಲೆಟ್ ಮೇಲೆ ಅಪರಿಚಿತನ ಕೆಮೆರಾ ಕಣ್ಣು – ಯುವತಿಯ ಸ್ನಾನದ ದೃಶ್ಯ ರೆಕಾರ್ಡ್!
WhatsApp Group
Join Now