ಪ್ರೀತಿಸಿ, ಹಿರಿಯರನ್ನು ಒಪ್ಪಿಸಿ ಹಸೆಮಣೆ ಏರಿದ್ದ ಆ ಜೋಡಿಯ ಸಂಸಾರ ನೂರು ಕಾಲ ಸುಖವಾಗಿರಬೇಕಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಮದುವೆಯಾದ ಕೇವಲ ಒಂದು ತಿಂಗಳ ಸಂಭ್ರಮ ಮುಗಿಯುವ ಮೊದಲೇ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಿದ್ಧಪೇಟೆ ಜಿಲ್ಲೆಯ ಕೊಂಡಪಾಕದಲ್ಲಿ ನಡೆದಿದೆ.
ಪ್ರೀತಿ ಪವಿತ್ರವಾಗಿತ್ತು, ಆದರೆ…
ಅಂಜಲಿ (21) ವೃತ್ತಿಯಲ್ಲಿ ದರ್ಜಿಯಾಗಿದ್ದಳು. ವಿನಯ್ (23) ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು, ಇಬ್ಬರ ಮನೆಯವರನ್ನು ಒಪ್ಪಿಸಿ ಕಳೆದ ಏಪ್ರಿಲ್ 9 ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು.
ಅನುಮಾನ ತಂದ ಆಪತ್ತು:
ನವದಂಪತಿಗಳ ನಡುವೆ ಬಿರುಕು ಮೂಡಿದ್ದು ಒಂದು ಸಣ್ಣ ಅನುಮಾನದಿಂದ. ಅಂಜಲಿ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದಾರೆ ಎಂದು ಪತಿ ವಿನಯ್ ಅನುಮಾನ ವ್ಯಕ್ತಪಡಿಸಿದ್ದರು. ಈ ವಿಷಯವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಸಿಟ್ಟಿನಲ್ಲಿ ಮೇ 7 ರಂದು ವಿನಯ್ ತನ್ನ ಪತ್ನಿಯನ್ನು ಆಕೆಯ ತವರು ಮನೆಗೆ ಕರೆತಂದು ಬಿಟ್ಟು ಹೋಗಿದ್ದರು.
ನಂತರ ಫೋನ್ ಮೂಲಕವೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನನೊಂದ ಅಂಜಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿಯ ಸಾವಿನ ಸುದ್ದಿ ಕೇಳಿ ಪತಿ ಕೂಡಾ ಶರಣು:
ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮುಗಿಸಿ ಬೈಕ್ ಮೇಲೆ ಮನೆಗೆ ಮರಳುತ್ತಿದ್ದ ವಿನಯ್‌ಗೆ ಪತ್ನಿಯ ಸಾವಿನ ಸುದ್ದಿ ತಿಳಿಯಿತು. ಇದರಿಂದ ತೀವ್ರ ಆಘಾತಕ್ಕೊಳಗಾದ ಅವರು ಕುಕುನೂರುಪಲ್ಲಿ ಮಂಡಲದ ರಾಯವರಂ ಗ್ರಾಮದ ಹೊರವಲಯಕ್ಕೆ ಬಂದು ತಂದೆ ಸಹದೇವ್ ಅವರಿಗೆ ಕರೆ ಮಾಡಿದ್ದಾರೆ. “ನೀವು ಜಾಗ್ರತೆಯಾಗಿರಿ” ಎಂದು ಅಳುತ್ತಲೇ ಹೇಳಿ ಪೋನ್ ಕಟ್ ಮಾಡಿದ್ದಾರೆ. ತಕ್ಷಣವೇ ತನ್ನ ಸ್ನೇಹಿತರಿಗೆ ತಾನು ಇರುವ ಜಾಗದ ಲೊಕೇಶನ್ ಕಳುಹಿಸಿ, ಅಲ್ಲಿಯೇ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಸ್ನೇಹಿತರು ಮತ್ತು ಕುಟುಂಬಸ್ಥರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ವಿನಯ್ ಮೃತಪಟ್ಟಿದ್ದರು.
ಕಣ್ಣೀರಲ್ಲಿ ಮುಳುಗಿದ ಎರಡು ಕುಟುಂಬಗಳು:
ಒಂದೇ ತಿಂಗಳ ಅವಧಿಯಲ್ಲಿ ಮದುವೆಯ ಸಂಭ್ರಮ ಕಾಣಬೇಕಿದ್ದ ಎರಡು ಕುಟುಂಬಗಳಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಅಂಜಲಿಯ ತಾಯಿ ಪೋಚವ್ವ ಮತ್ತು ವಿನಯ್ ತಂದೆ ಸಹದೇವ್ ನೀಡಿದ ದೂರಿನ ಮೇರೆಗೆ ಕುಕುನೂರುಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಒಂದು ಸಣ್ಣ ಅನುಮಾನ ಮತ್ತು ಆತುರದ ನಿರ್ಧಾರಗಳು ಹೇಗೆ ಎರಡು ಜೀವಗಳನ್ನು ಬಲಿ ಪಡೆಯುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.