ಅರಮನೆ ಜಾಗ ಸರ್ಕಾರದ್ದು, ಅಂಬಾರಿಯನ್ನ ನಾವು ಪುಕ್ಕಟೆ ಪಡೆಯುತ್ತಿಲ್ಲ : ಪ್ರಮೋದಾದೇವಿಗೆ ಯತೀಂದ್ರ ತಿರುಗೇಟು

Spread the love

ಮೈಸೂರು ದಸರಾ ಮಹೋತ್ಸವ ಮುಗಿದ ಬೆನ್ನಲ್ಲೇ ರಾಜಮನೆತನ ಹಾಗೂ ರಾಜ್ಯ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ ಎನ್ನಬಹುದು. ದಸರಾ ವೇಳೆ ನಮ್ಮ ಸಂಪ್ರದಾಯಗಳಿಗೆ ಅಡ್ಡಿಯಾಗಿದೆ, ಪೊಲೀಸ್ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಬರೆದಿದ್ದ ನಾಲ್ಕು ಪುಟಗಳ ಪತ್ರಕ್ಕೆ ಇದೀಗ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಅರಮನೆ ಹಾಗೂ ಅಂಬಾರಿಯ ವಿಚಾರವಾಗಿ ನೇರ ನುಡಿಗಳ ಮೂಲಕ ರಾಜಮನೆತನದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಅರಮನೆ ಸರ್ಕಾರದ ಸ್ವತ್ತು, ಅಂಬಾರಿಯೂ ಉಚಿತವಲ್ಲ!

ಪ್ರಮೋದಾದೇವಿ ಒಡೆಯರ್ ಅವರು ಬರೆದಿದ್ದ ಪತ್ರದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ ಸಿದ್ದರಾಮಯ್ಯ, “ಅರಮನೆಯ ಜಾಗ ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದ್ದು. ಅರಮನೆಯ ಬಹುತೇಕ ಭಾಗ ಸರ್ಕಾರದ ಸುಪರ್ದಿಯಲ್ಲೇ ಇದೆ. ರಾಜಮನೆತನದವರಿಗೆ ಕೇವಲ ವಾಸ ಮಾಡಲು ಮಾತ್ರ ಸ್ವಲ್ಪ ಜಾಗವನ್ನ ಬಿಟ್ಟುಕೊಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಜಂಬೂಸವಾರಿಗೆ ಬಳಸುವ ಚಿನ್ನದ ಅಂಬಾರಿಯನ್ನ ರಾಜಮನೆತನದಿಂದ ಸರ್ಕಾರವೇನೂ ಉಚಿತವಾಗಿ ಪಡೆಯುತ್ತಿಲ್ಲ. ಬದಲಾಗಿ, ಅದಕ್ಕೆ ಸರ್ಕಾರದಿಂದ ಹಣವನ್ನ ಪಾವತಿಸಿ ಪಡೆಯಲಾಗುತ್ತಿದೆ ಎಂಬ ವಿಚಾರವನ್ನ ಅವರು ಬಹಿರಂಗಪಡಿಸಿದ್ದಾರೆ.

ಮಾಧ್ಯಮಗಳಿಗೆ ಪತ್ರ ಬರೆದಿದ್ದಕ್ಕೆ ಅಸಮಾಧಾನ

ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಸರ್ಕಾರದ ಜೊತೆ ಮಾತನಾಡಬಹುದಿತ್ತು. ಅದನ್ನ ಬಿಟ್ಟು ಏಕಾಏಕಿ ಮಾಧ್ಯಮಗಳಿಗೆ ನಾಲ್ಕು ಪುಟಗಳ ಪತ್ರ ಬಿಡುಗಡೆ ಮಾಡುವುದು ಎಷ್ಟರಮಟ್ಟಿಗೆ ಸರಿ? ಎಂದು ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

“ನಾವು ನಿರಂತರವಾಗಿ ರಾಜಮನೆತನದ ಸಂಪರ್ಕದಲ್ಲಿದ್ದೆವು. ದಸರಾ ಆರಂಭಕ್ಕೂ ಮುನ್ನ ನಾವೇ ಖುದ್ದಾಗಿ ಹೋಗಿ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದೆವು. ಅವರಿಂದ ಏನಾದರೂ ಸಲಹೆಗಳಿವೆಯಾ ಎಂದು ಕೇಳಿದ್ದೆವು. ಆಗ ಯಾವುದೇ ಸಮಸ್ಯೆ ಹೇಳಿಕೊಳ್ಳದವರು, ಈಗ ನೇರವಾಗಿ ಪತ್ರಿಕೆಗಳಿಗೆ ಪತ್ರ ಕೊಟ್ಟಿದ್ದಾರೆ. ಅವರಿಗೆ ಸಮಸ್ಯೆ ಇದ್ದರೆ, ನಾವೇ ಖುದ್ದಾಗಿ ಹೋಗಿ ಮಾತನಾಡಲು ಸಿದ್ಧರಿದ್ದೇವೆ. ಆದರೆ ಈ ರೀತಿ ಬಹಿರಂಗವಾಗಿ ಪತ್ರ ಬರೆಯುವ ಅಗತ್ಯವಿರಲಿಲ್ಲ” ಎಂದು ಯತೀಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ದಸರಾ ನಾಡಹಬ್ಬ, ಷರತ್ತುಗಳಿಗೆ ಒಪ್ಪಲು ಸಾಧ್ಯವಿಲ್ಲ

ಪ್ರಮೋದಾದೇವಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದ ಕೆಲವು ಸಲಹೆಗಳನ್ನ ಸರ್ಕಾರ ಒಪ್ಪುವುದಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. “ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ಎರಡು ದಿನಗಳ ಕಾಲ ಅರಮನೆಯನ್ನ ಸಂಪೂರ್ಣವಾಗಿ ನಮಗೆ ಬಿಟ್ಟುಕೊಡಬೇಕು, ಜಂಬೂಸವಾರಿಯನ್ನ ಚಾಮುಂಡಿ ಬೆಟ್ಟದ ರಥೋತ್ಸವದ ದಿನ ಮಾಡಬೇಕು ಎಂಬ ಅವರ ಸಲಹೆಗಳನ್ನ ಒಪ್ಪಲು ಸಾಧ್ಯವಿಲ್ಲ.

1971-72ರಿಂದಲೂ ದಸರಾ ಉತ್ಸವವನ್ನ ಸರ್ಕಾರವೇ ಅಧಿಕೃತವಾಗಿ ನಡೆಸಿಕೊಂಡು ಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಾಡಹಬ್ಬವೇ ಹೊರತು ಖಾಸಗಿ ಹಬ್ಬವಲ್ಲ. ಹೀಗಾಗಿ ದಸರಾ ಹೇಗೆ ನಡೆಯಬೇಕು, ಯಾವ ರೀತಿ ಆಚರಣೆ ಮಾಡಬೇಕು ಎಂಬ ಅಂತಿಮ ತೀರ್ಮಾನವನ್ನ ಸರ್ಕಾರವೇ ತೆಗೆದುಕೊಳ್ಳುತ್ತದೆ” ಎಂದು ಅವರು ಕಡ್ಡಿ ತುಂಡರಿಸಿದಂತೆ ಹೇಳಿದ್ದಾರೆ.

ಸಮನ್ವಯದ ಕೊರತೆ ನೀಗಿಸುವ ಭರವಸೆ

ಜಟ್ಟಿ ಕಾಳಗದ ವೇಳೆ ಆದ ವಿಳಂಬ ಹಾಗೂ ಪೊಲೀಸ್ ಅಧಿಕಾರಿಗಳ ವರ್ತನೆ ಕುರಿತ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಜಟ್ಟಿಗಳು ತಡವಾಗಿ ಬಂದಿದ್ದರಿಂದ ಒಂದಷ್ಟು ಗೊಂದಲಗಳಾಗಿವೆ. ಪೊಲೀಸರು ಹಾಗೂ ರಾಜಮನೆತನದವರ ಹೇಳಿಕೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಸತ್ಯಾಂಶವನ್ನು ಪರಿಶೀಲಿಸಿ, ಯಾರದು ತಪ್ಪು ಎಂಬುದನ್ನು ಸರಿಪಡಿಸುತ್ತೇವೆ. ಇನ್ನು ಅಂಬಾರಿ ಹೊರುವ ಆನೆ ಯಾರು ಎಂಬ ಮಾಹಿತಿ ನೀಡದ ಬಗ್ಗೆ ಅರಣ್ಯ ಇಲಾಖೆಯಲ್ಲಿಯೇ ಕೊನೆ ಕ್ಷಣದವರೆಗೂ ಗೊಂದಲವಿತ್ತು. ಹೀಗಾಗಿ ವಿಳಂಬವಾಗಿದೆ.

ಒಟ್ಟಿನಲ್ಲಿ, ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕುಳಿತು ಮಾತನಾಡಿದರೆ ಬಗೆಹರಿಯುತ್ತದೆ. ರಾಜಮನೆತನದ ಸಂಪ್ರದಾಯಗಳಿಗೆ ಸರ್ಕಾರದಿಂದ ಯಾವತ್ತೂ ಅಡ್ಡಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ. ಸರ್ಕಾರದ ವತಿಯಿಂದಲೇ ಅಧಿಕೃತ ಪ್ರತಿನಿಧಿಗಳನ್ನ ಕಳುಹಿಸಿ ಅವರೊಂದಿಗೆ ಮಾತುಕತೆ ನಡೆಸುತ್ತೇವೆ” ಎಂದು ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

WhatsApp Group Join Now

Spread the love

Leave a Reply