ಕೊಡಗು ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ರಾತ್ರಿ ಕಾರಿನಲ್ಲಿ ಮನೆಗೆ ಹೊರಟಿದ್ದ ಒಂದೇ ಕುಟುಂಬದ ಮೂವರು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ವರ್ಷದ ಪುಟ್ಟ ಮಗು ಸೇರಿದಂತೆ ತಂದೆ, ತಾಯಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕೊಡಗಿನ ಸಿದ್ದಾಪುರ ಸಮೀಪ ನಡೆದ ಈ ಹೃದಯವಿದ್ರಾವಕ ಘಟನೆ ಇಡೀ ಗ್ರಾಮವನ್ನೇ ಶೋಕದಲ್ಲಿ ಮುಳುಗಿಸಿದೆ.
ರಾತ್ರಿ ಮನೆಗೆ ಹೊರಟಿದ್ದ ಕುಟುಂಬಕ್ಕೆ ಕಾದಿತ್ತು ಘೋರ ದುರಂತ. ಸ್ಯಾಂಟ್ರೋ ಕಾರು ಕೆರೆಗೆ ಉರುಳಿ ಬಿದ್ದು ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿದ್ದಾರೆ. ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಬಾಣಂಗಾಲ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿಗಳಾದ 36 ವರ್ಷದ ವಿಜೇಶ್, ಅವರ ಪತ್ನಿ 34 ವರ್ಷದ ಪಮಿತ ಹಾಗೂ ನಾಲ್ಕು ವರ್ಷದ ಮಗಳು ಲಿಯ ಎಂದು ಗುರುತಿಸಲಾಗಿದೆ.
ರಾತ್ರಿ ಸಿದ್ದಾಪುರದಿಂದ ಬಾಣಂಗಾಲ ಗ್ರಾಮದ ಮನೆಗೆ ಸ್ಯಾಂಟ್ರೋ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ಕಾರಿನೊಳಗೆ ಸಿಲುಕಿಕೊಂಡ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇನ್ನು ಬೆಳಗ್ಗೆ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರು ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಕಾರಿನೊಳಗೆ ಮೂವರ ಮೃತದೇಹಗಳು ಪತ್ತೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಷ್ಟಕ್ಕೂ ಕಾರು ನಿಯಂತ್ರಣ ತಪ್ಪಿದ್ದು ಹೇಗೆ? ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದೇ ಕುಟುಂಬದ ಮೂವರು ದುರಂತ ಸಾವಿಗೀಡಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ಕು ವರ್ಷದ ಪುಟ್ಟ ಕಂದಮ್ಮ ಸೇರಿದಂತೆ ತಂದೆ, ತಾಯಿ ಸಾವಿನಿಂದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಮನೆಗೆ ತೆರಳುತ್ತಿದ್ದ ಕುಟುಂಬಕ್ಕೆ ಕಾದಿತ್ತು ವಿಧಿಯ ಕ್ರೂರ ಆಟ: ಕೆರೆಯಲ್ಲಿ ಮುಳುಗಿದ ಕಾರು, ಮಗು ಸೇರಿ ಮೂವರ ಸಾವು!
WhatsApp Group
Join Now