ಬೆಂಗಳೂರಿನ ಬ್ರೂಕ್ಫೀಲ್ಡ್ ನಲ್ಲಿರುವ ಕೇಪ್ಜೆಮಿನಿ ಹೆಚ್‌ಎಎಲ್ ಕ್ಯಾಂಪಸ್ ಆವರಣದ ಸೊಸೈಟಿ ಜನರಲ್ ಬೇಬಿ ಕೇರ್ (ಡೇ ಕೇರ್) ಕೇಂದ್ರದಲ್ಲಿ ಪುಟ್ಟ ಮಕ್ಕಳ ಮೇಲೆ ಸಿಬ್ಬಂದಿ ಅಮಾನವೀಯವಾಗಿ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಅಮಾನವೀಯ ದೃಶ್ಯಗಳ ವಿಡಿಯೋ ಆಧಾರದ ಮೇಲೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಹೆಚ್‌ಎಎಲ್ (HAL) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಗಾಂಭೀರ್ಯತೆಯನ್ನು ಅರಿತ ಪೊಲೀಸರು ತಕ್ಷಣವೇ ಡೇ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಕಠಿಣ ಮೊಕದ್ದಮೆ ಹೂಡಲಾಗಿದೆ.
ತಲೆಮರೆಸಿಕೊಂಡಿರುವ ಹಾಗೂ ಘಟನೆಗೆ ಸಹಕರಿಸಿದ ಉಳಿದ ಆರೋಪಿಗಳಿಗಾಗಿ ತನಿಖೆ ಚುರುಕುಗೊಂಡಿದೆ. ಈ ಘಟನೆಯು ರಾಜಧಾನಿಯಲ್ಲಿ ಖಾಸಗಿ ಡೇ ಕೇರ್ ಕೇಂದ್ರಗಳ ಸುರಕ್ಷತೆ ಮತ್ತು ನಂಬಿಕಾರ್ಹತೆಯ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ತಮ್ಮ ಕಂದಮ್ಮಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಂದ ಐಟಿ ಉದ್ಯೋಗಿಗಳು ಈ ಕೇಂದ್ರಕ್ಕೆ ಬಿಟ್ಟು ಹೋಗುತ್ತಿದ್ದರು. ಆದರೆ, ಅಲ್ಲಿನ ಸಿಬ್ಬಂದಿ ಮಾತ್ರ ಎರಡು ಹಾಗೂ ಮೂರು ವರ್ಷದೊಳಗಿನ ಕರುಳಿನ ಕುಡಿಗಳಿಗೆ ನರಕ ದರ್ಶನ ಮಾಡಿಸಿದ್ದಾರೆ. ಮಕ್ಕಳು ಅತ್ತಾಗ ಅಥವಾ ಗಲಾಟೆ ಮಾಡಿದಾಗ ಅವರನ್ನು ಸಮಾಧಾನಪಡಿಸುವ ಬದಲು, ಕ್ರೂರವಾಗಿ ನಡೆದುಕೊಂಡಿರುವ ದೃಶ್ಯಗಳು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಹೆತ್ತವರ ಎದೆ ಜರಗುವಂತೆ ಮಾಡಿದೆ.
ವೈರಲ್ ವಿಡಿಯೋದಲ್ಲಿದೆ ಸಿಬ್ಬಂದಿಯ ಕ್ರೌರ್ಯದ ನಗ್ನನರ್ತನ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಸಿಬ್ಬಂದಿಯ ವಿಕೃತ ಮನಸ್ಥಿತಿಗೆ ಕನ್ನಡಿ ಹಿಡಿದಿವೆ. ಅಳುತ್ತಿರುವ ಪುಟ್ಟ ಮಕ್ಕಳನ್ನು ಹೆದರಿಸುವುದು ಮಾತ್ರವಲ್ಲದೆ, ಅವರನ್ನು ವಾಷಿಂಗ್ ಮೆಷಿನ್ ಒಳಗಿಟ್ಟು ಕ್ರೂರ ಆಟವಾಡಿದ್ದಾರೆ. ಅಷ್ಟೇ ಅಲ್ಲದೆ, ಮಕ್ಕಳನ್ನು ಬಲವಂತವಾಗಿ ಪಾಶ್ಚಾತ್ಯ ಶೈಲಿಯ ಶೌಚಾಲಯದ ಮೇಲೆ ಕೂರಿಸುವುದು ಹಾಗೂ ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ನೇರವಾಗಿ ಬಾಯಿಗೆ ನೀರು ಸಿಂಪಡಿಸಿ ವಿಕೃತಿ ಮೆರೆದಿದ್ದಾರೆ. ಇನ್ನು ಕೆಲ ಮಕ್ಕಳನ್ನು ಬಾತ್ರೂಮ್ ಒಳಗೆ ಹಾಕಿ ಲಾಕ್ ಮಾಡಿ, ಸದ್ದೇ ಮಾಡದಂತೆ ಬೆದರಿಕೆ ಹಾಕಿರುವ ಬೆಚ್ಚಿಬೀಳಿಸುವ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ‘ಡೇ ಕೇರ್’ ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಕೇಸ್ : ಇಬ್ಬರು ಸಿಬ್ಬಂದಿಗಳು ಅರೆಸ್ಟ್
WhatsApp Group
Join Now