ಕೇರಳದ ತಿರುವನಂತಪುರಂ ಜಿಲ್ಲೆಯ ಮಲಯಿಂಕೀಳು ಸಮೀಪ ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಗುವನ್ನು ಇವಾನಾ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ 3.30 ರಿಂದ 4.30 ರ ನಡುವೆ ವಿಳವೂರ್ಕ್ಕಲ್ ಗ್ರಾಮದ ಮನೆಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪೊಲೀಸ್ ಎಫ್‌ಐಆರ್ (FIR) ಪ್ರಕಾರ, ಆರೋಪಿ ತಾಯಿ ಮಗುವಿನೊಂದಿಗೆ ಬೆಡ್‌ರೂಮ್ ಪ್ರವೇಶಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾಳೆ. ಬಳಿಕ ಚಾಕುವಿನಿಂದ ಮಗುವಿನ ಕುತ್ತಿಗೆಗೆ ತೀವ್ರವಾಗಿ ಇರಿದು ಗಂಭೀರ ಗಾಯಗೊಳಿಸಿದ್ದಾಳೆ.
ಮಗು ಮತ್ತು ತಾಯಿ ಬಹಳ ಹೊತ್ತಿನಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಸಂಬಂಧಿಕರೊಬ್ಬರು ಅನುಮಾನಗೊಂಡು ಕೊಠಡಿಯ ಬಾಗಿಲು ತಟ್ಟಿದ್ದಾರೆ. ಈ ವೇಳೆ ಹೊರಬಂದ ತಾಯಿ ಕ್ರಿಸ್ಟಿ, ತಾನೇ ಮಗುವನ್ನು ಕೊಂದಿರುವುದಾಗಿ ತಿಳಿಸಿದ್ದಾಳೆ.
ತಕ್ಷಣವೇ ಮಗುವನ್ನು ಸ್ಥಳೀಯ ವಿಳವೂರ್ಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು, ನಂತರ 108 ಆಂಬುಲೆನ್ಸ್ ಮೂಲಕ ತಿರುವನಂತಪುರಂನ ಎಸ್‌ಎಟಿ (SAT) ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸಂಜೆ 5.52 ರ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಘಟನೆ ಸಂಬಂಧ ಆರೋಪಿ ಕ್ರಿಸ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 103(1) (ಕೊಲೆ ಪ್ರಕರಣ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೇರಳದಲ್ಲಿ ಬೆಚ್ಚಿಬೀಳಿಸುವ ಕೃತ್ಯ : ಒಂದೂವರೆ ವರ್ಷದ ಮಗುವಿನ ಕತ್ತು ಸೀಳಿ ಕೊಂದ ಪಾಪಿತಾಯಿ
WhatsApp Group
Join Now