ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ನಾಯಕತ್ವ ಬದಲಾವಣೆ’ಯ ವದಂತಿಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬ್ರೇಕ್ ಹಾಕಿದ್ದಾರೆ.
“ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪ್ರಸ್ತಾವನೆ ಇಲ್ಲ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವೈಶಾಖ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ರಾಜ್ಯದಲ್ಲಿ ನಾಯಕತ್ವದ ಕುರಿತು ಗೊಂದಲಗಳಿರುವುದು ನಿಜ. ಆದರೆ, ಈ ಗೊಂದಲಗಳನ್ನು ಶೀಘ್ರದಲ್ಲಿಯೇ ಬಗೆಹರಿಸುತ್ತೇವೆ. ಪ್ರಸ್ತುತ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ, ಹೀಗಾಗಿ ಬದಲಾವಣೆಯ ಚರ್ಚೆ ಅಪ್ರಸ್ತುತ. ಒಂದು ವೇಳೆ ಅಂತಹ ಸಂದರ್ಭ ಬಂದರೆ, ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅದಕ್ಕೆ ಇನ್ನೂ ಸಮಯವಿದೆ,” ಎಂದು ಅವರು ತಿಳಿಸಿದರು.
ಐಡಿಯಾಲಜಿ ಮುಖ್ಯ ಎಂದ ಖರ್ಗೆ..!
“ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಲಿ” ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅವರು ಹೇಳುತ್ತಾರೆ, ನೀವೂ ಹೇಳುತ್ತೀರಿ, ಹೈಕಮಾಂಡ್ ಕೂಡ ಹೇಳಬಹುದು. ಆದರೆ ಎಲ್ಲದಕ್ಕೂ ಹಣೆಬರಹ ಬೇಕು. ಹಣೆಬರಹಕ್ಕಿಂತ ಹೆಚ್ಚಾಗಿ ನಮಗೆ ಪಕ್ಷದ ಸಿದ್ಧಾಂತ ಮುಖ್ಯ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಪಕ್ಷಕ್ಕಾಗಿ ಹಲವು ದಶಕಗಳಿಂದ ದುಡಿಯುತ್ತಿರುವುದಾಗಿ ಸ್ಮರಿಸಿದ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಂತಹ ಹಿರಿಯ ನಾಯಕರು ಹೈಕಮಾಂಡ್ ಮೂಲಕ ಇಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಪ್ರಸ್ತಾಪವೇ ಇಲ್ಲ, ಸಿದ್ದರಾಮಯ್ಯನವರೇ ಐದು ವರ್ಷ ಆಡಳಿತ – ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿಕೆ!
WhatsApp Group
Join Now