ಕಳೆದ ಮೇ 10ರಂದು ನಾಗಮಲೆ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಅನಿರೀಕ್ಷಿತವಾಗಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 10 ವರ್ಷದ ಪುಟ್ಟ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದನು. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಪ್ರವಾಸಿಗರು ಮತ್ತು ಚಾರಣಿಗರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತ್ತು.
ಅರಣ್ಯ ಪ್ರದೇಶಗಳಲ್ಲಿ ಜನರ ಮುಕ್ತ ಸಂಚಾರವು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿತ್ತು.
ಹೌದು.. ಘಟನೆಯ ಗಂಭೀರತೆಯನ್ನು ಮನಗಂಡ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ ಅವರು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಸಾರ್ವಜನಿಕರ ಪ್ರಾಣ ರಕ್ಷಣೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರ ಮತ್ತು ಸ್ಥಳೀಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಚಿವರ ನಿರ್ದೇಶನದ ಮೇರೆಗೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಠಾತ್ ಸುತ್ತೋಲೆ ಹೊರಡಿಸಿದ್ದಾರೆ. ಚಿರತೆ, ಹುಲಿ, ಆನೆ ಹಾಗೂ ಕರಡಿಗಳ ಸಂಚಾರವಿರುವ ಎಲ್ಲಾ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಚಾರಣ ಚಟುವಟಿಕೆಗಳನ್ನು ತಕ್ಷಣವೇ ಬಂದ್ ಮಾಡಲಾಗಿದೆ.
ಚಾರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ‘ಪ್ರಮಾಣಿತ ಕಾರ್ಯ ವಿಧಾನ’ (SOP) ಅಡಿಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರುವವರೆಗೂ ಯಾವುದೇ ಚಾರಣಕ್ಕೆ ಅವಕಾಶವಿಲ್ಲ. ಆಯಾ ವಿಭಾಗದ ಅರಣ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸುರಕ್ಷತಾ ಸಿದ್ಧತೆಗಳನ್ನು ಪರಿಶೀಲಿಸಿ, ಇಲಾಖೆಗೆ ವರದಿ ಸಲ್ಲಿಸಬೇಕು. ತದನಂತರವಷ್ಟೇ ಚಾರಣ ಪುನರಾರಂಭದ ಬಗ್ಗೆ ನಿರ್ಧರಿಸಲಾಗುವುದು.
ಪ್ರಮುಖ ಅರಣ್ಯ ಪ್ರದೇಶಗಳಿಗೆ ಅನ್ವಯ : ಈ ಆದೇಶವು ಕೇವಲ ಚಾಮರಾಜನಗರಕ್ಕೆ ಸೀಮಿತವಾಗಿಲ್ಲ. ಪಶ್ಚಿಮ ಘಟ್ಟಗಳು ಮತ್ತು ಮಲೆನಾಡು ಭಾಗದ ಪ್ರಮುಖ ಪ್ರವಾಸಿ ತಾಣಗಳಾದ ಬಂಡೀಪುರ, ನಾಗರಹೊಳೆ, ಬಿ.ಆರ್.ಟಿ, ಭದ್ರಾ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆ ರಾಜ್ಯದ ಎಲ್ಲಾ ವನ್ಯಜೀವಿ ವಿಭಾಗಗಳಿಗೆ ಅನ್ವಯಿಸಲಿದೆ. ವಾರಾಂತ್ಯದಲ್ಲಿ ಚಾರಣಕ್ಕೆ ಹೋಗುವ ಯುವಪಡೆಗೆ ಇದು ನಿರಾಸೆ ಮೂಡಿಸಿದರೂ, ಜೀವ ರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ.
ಚಾರಣಿಗರಿಗೆ ಎಚ್ಚರಿಕೆ: ಮುಂದಿನ ಆದೇಶದವರೆಗೆ ಯಾವುದೇ ಅಧಿಕೃತ ಅಥವಾ ಅನಧಿಕೃತ ಚಾರಣ ಪಥಗಳಲ್ಲಿ ಸಂಚಾರ ಮಾಡುವುದು ಅಪರಾಧವೆಂದು ಪರಿಗಣಿಸಲಾಗುವುದು. ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಕಾಡಿಗೆ ಪ್ರವೇಶಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಒಟ್ಟಾರೆಯಾಗಿ, ಕಾಡುಪ್ರಾಣಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರವು ದೊಡ್ಡ ಹೆಜ್ಜೆಯನ್ನಿಟ್ಟಿದೆ. ಪ್ರಕೃತಿ ಸೌಂದರ್ಯವನ್ನು ಸವಿಯುವ ಭರದಲ್ಲಿ ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆ ತರುವ ಮತ್ತು ಪ್ರಾಣಾಪಾಯ ತಂದುಕೊಳ್ಳುವ ಪ್ರವೃತ್ತಿಗೆ ಈ ಮೂಲಕ ಬ್ರೇಕ್ ಬಿದ್ದಂತಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.
ಟ್ರೆಕ್ಕಿಂಗ್ ಪ್ರಿಯರಿಗೆ ಸರ್ಕಾರ ಶಾಕ್..! ರಾಜ್ಯಾದ್ಯಂತ ಚಾರಣ ಬ್ಯಾನ್ ಮಾಡಿದ ಸರ್ಕಾರ.. ಕಾರಣವೇನು ಗೊತ್ತೆ.?
WhatsApp Group
Join Now