ವಾರದ ಬಳಿಕ ಸಮಾಧಿಯಿಂದ ಹೊರಬಂತು ಶವ! ಆಸ್ತಿ ದುರಾಸೆಗೆ ಮಣ್ಣಾಯ್ತು ಅಣ್ಣ-ತಂಗಿಯರ ಬಾಂಧವ್ಯ! ಹಾವೇರಿಯಲ್ಲಿ ಹೆತ್ತ ತಂದೆಯ ಸಾವಿನಲ್ಲೇ ಹೆಣ್ಣುಮಕ್ಕಳು-ಮಗನ ಮಹಾಕಾಳಗ ಬಟಾಬಯಲಾಗುತ್ತಾ ಆಸ್ತಿ ಕೊಲೆ ರಹಸ್ಯ?
“ಆಸ್ತಿ ಅಂತ ಬಂದರೆ ಅಣ್ಣ-ತಂಗಿಯರ ಪ್ರೀತಿ, ರಕ್ತಸಂಬಂಧ ಎಲ್ಲವೂ ಮಣ್ಣಾಗಿ ಹೋಗುತ್ತೆ” ಅನ್ನೋದಕ್ಕೆ ಹಾವೇರಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಕಣ್ಣೆದುರಿಗಿರೋ ಸಾಕ್ಷಿ. ತಂದೆಯನ್ನೇ ಆಸ್ತಿಗಾಗಿ ಅಣ್ಣ ಕೊಲೆ ಮಾಡಿದ್ದಾನೆ ಅಂತ ತಂಗಿಯರು ಆರೋಪ ಮಾಡ್ತಿದ್ದರೆ, ಇಲ್ಲ.. ಆಸ್ತಿಗಾಗಿ ತಂಗಿಯರೇ ತಂದೆಯನ್ನ ಕಟುಕನಂತೆ ಕೊಂದಿದ್ದಾರೆ ಅಂತ ಅಣ್ಣ ಪ್ರತಿದೂರು ನೀಡಿದ್ದಾನೆ! ಅಣ್ಣ-ತಂಗಿಯರ ಈ ಭೀಕರ ದೂರು-ಪ್ರತಿದೂರುಗಳ ನಡುವೆ, ವಾರದ ಹಿಂದೆ ಮಣ್ಣಾಗಿದ್ದ ವೃದ್ಧ ತಂದೆಯ ಶವವನ್ನು ಈಗ ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುವ ಮಟ್ಟಕ್ಕೆ ಜಗಳ ತಲುಪಿದೆ!
27 ಎಕರೆ ಜಮೀನು ತಂದಿಟ್ಟ ಆಸ್ತಿ ಕಲಹ!
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಶಿರಬಡಗಿ ಗ್ರಾಮದ 75 ವರ್ಷದ ವಯೋವೃದ್ಧ ಗುರುಬಸಪ್ಪ ಬಸಾಪುರ ಎಂಬುವವರೇ ಈಗ ಸಾವಿನ ಸುತ್ತ ಅನುಮಾನದ ಕಾರ್ಮೋಡ ಮೂಡಿಸಿರೋ ದುರ್ದೈವಿ. ಗುರುಬಸಪ್ಪ ಅವರಿಗೆ ರವಿ ಬಸಾಪುರ ಎಂಬ ಒಬ್ಬ ಪುತ್ರ ಹಾಗೂ ರೇಖಾ, ಸುಜಾತಾ, ಗಿರಿಜಾ, ಪಾರ್ವತಿ ಎಂಬ ನಾಲ್ವರು ಪುತ್ರಿಯರಿದ್ದಾರೆ. ಇವರ ಬಳಿ ಬರೋಬ್ಬರಿ 27 ಎಕರೆ ಜಮೀನಿತ್ತು. ಇತ್ತೀಚೆಗೆ ಗುರುಬಸಪ್ಪ ಅವರು ತಮ್ಮ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಿದ್ದರು. ಆದರೆ ಇದು ಮಗ ರವಿ ಬಸಾಪುರನ ಕೆಣ್ಣಿಗೆ ಕೆಂಪಾಗುವಂತೆ ಮಾಡಿತ್ತು. ಆಸ್ತಿ ಹಂಚಿಕೆ ವಿಚಾರವಾಗಿ ಕುಟುಂಬದ ಜಗಳ ಸಿವಿಲ್ ಕೋರ್ಟ್ ಮೆಟ್ಟಿಲನ್ನೂ ಏರಿತ್ತು.
ತೋಟದಲ್ಲಿ ನಿಗೂಢ ಸಾವು.. ಅಂತ್ಯಸಂಸ್ಕಾರದ ಬಳಿಕ ಶುರುವಾಯ್ತು ಅಸಲಿ ಆಟ!
ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವಾಗಲೇ, ಜೂನ್ 15ರಂದು ಗುರುಬಸಪ್ಪ ತಮ್ಮ ತೋಟದಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಏನೂ ತಿಳಿಯದಂತೆ ಕುಟುಂಬಸ್ಥರೆಲ್ಲಾ ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ವಾರ ಕಳೆಯುವಷ್ಟರಲ್ಲಿ ಆಸ್ತಿ ಹಂಚಿಕೆಯ ಕಿಡಿ ಮತ್ತೊಮ್ಮೆ ಸ್ಫೋಟಗೊಂಡಿದೆ. “ತಂದೆ ನಮಗೂ ಆಸ್ತಿ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ಅಣ್ಣ ರವಿಯೇ ತಂದೆಯನ್ನು ಕೊಲೆ ಮಾಡಿದ್ದಾನೆ” ಎಂದು ತಂಗಿಯರು ಸವಣೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಾನ್ಯಾಕೆ ಕೊಲ್ಲಲಿ? ತಂಗಿಯರೇ ಕೊಲೆಗಡಕರು ಎಂದ ಅಣ್ಣ!
ತಂಗಿಯರ ಈ ಗಂಭೀರ ಆರೋಪಕ್ಕೆ ಕೌಂಟರ್ ಕೊಟ್ಟಿರೋ ಅಣ್ಣ ರವಿ ಬಸಾಪುರ, “ನಾನು ತಂದೆಯನ್ನು ಕೊಂದಿಲ್ಲ, ನನ್ನ ತಂಗಿಯರೇ ಆಸ್ತಿ ದುರಾಸೆಗೆ ತಂದೆಯನ್ನು ಕೊಲೆ ಮಾಡಿ, ಈಗ ಆ ಕೊಲೆ ಕೇಸನ್ನು ನನ್ನ ತಲೆಗೆ ಕಟ್ಟಿ ನನ್ನನ್ನು ಜೈಲಿಗೆ ಕಳಿಸಿ ಇಡೀ ಆಸ್ತಿ ಲಪಟಾಯಿಸಲು ಪ್ಲ್ಯಾನ್ ಮಾಡಿದ್ದಾರೆ” ಎಂದು ತಂಗಿಯರ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾನೆ! ಒಂದೇ ರಕ್ತದ ಒಡಹುಟ್ಟಿದವರು ತಂದೆಯ ಶವದ ಮುಂದೆಯೇ ಹೀಗೆ ಕಚ್ಚಾಡುತ್ತಿರುವುದು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.
ಸಮಾಧಿ ಸೀಳಿ ಹೊರಬಂದ ಶವ.. ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಅಸಲಿ ಸತ್ಯ!
ಅಣ್ಣ-ತಂಗಿಯರ ದೂರು ಹಾಗೂ ಪ್ರತಿದೂರನ್ನು ಗಂಭೀರವಾಗಿ ಪರಿಗಣಿಸಿರುವ ಸವಣೂರು ಪೊಲೀಸರು ಹಾಗೂ ತಹಶೀಲ್ದಾರ್ ರವಿಕುಮಾರ್ ಕೊರವರ, ತನಿಖೆಗೆ ಮಹತ್ವದ ಟ್ವಿಸ್ಟ್ ನೀಡಿದ್ದಾರೆ. ತಹಶೀಲ್ದಾರ್ ಸಮ್ಮುಖದಲ್ಲೇ ವಾರದ ಹಿಂದೆ ಸಮಾಧಿ ಮಾಡಿದ್ದ ವೃದ್ಧ ಗುರುಬಸಪ್ಪ ಅವರ ಶವವನ್ನು ಮಣ್ಣಿನಿಂದ ಹೊರತೆಗೆಯಲಾಗಿದೆ. ಸ್ಥಳದಲ್ಲೇ ವೈದ್ಯಕೀಯ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ವೃದ್ಧ ಗುರುಬಸಪ್ಪ ಅವರದ್ದು ಸಹಜ ಸಾವೋ? ಆತ್ಮಹತ್ಯೆಯೋ? ಅಥವಾ ಆಸ್ತಿಗಾಗಿ ಹೆತ್ತ ಮಗ ಅಥವಾ ಮಗಳೇ ಮಾಡಿದ ಕಗ್ಗೊಲೆಯೋ? ಈ ಎಲ್ಲಾ ಯಕ್ಷಪ್ರಶ್ನೆಗಳಿಗೆ ಈಗ ಪೋಸ್ಟ್‌ಮಾರ್ಟಂ ವರದಿಯೇ ಅಂತಿಮ ಉತ್ತರ ನೀಡಬೇಕಿದೆ.
27 ಎಕರೆ ಜಮೀನಿಗಾಗಿ ಹೆತ್ತ ತಂದೆಯ ಸಾವು ಸಸ್ಪೆನ್ಸ್! ಅಣ್ಣನೇ ಕೊಲೆಗಾರ ಎಂದ ತಂಗಿಯರು, ತಂಗಿಯರೇ ಹಂತಕರು ಎಂದ ಅಣ್ಣ!
WhatsApp Group
Join Now