ಮೈಸೂರು ಸ್ಯಾಂಡಲ್ ಸೋಪ್‌ಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು 6.20 ಕೋಟಿ ರೂ.ಪಾವತಿಸಿ ಎರಡು ವರ್ಷಗಳ ಕಾಲ ರಾಯಭಾರಿಯಾಗಿ ನೇಮಕ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಟೀಕಿಸಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ, ಸರಕಾರ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದೆ ಅಷ್ಟೇ ಟೀಕಿಸಿದ್ದಾರೆ.
ಶನಿವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಇನ್ಸ್ಟಾಟ್ರಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಅವರು, ಕರ್ನಾಟಕದಲ್ಲಿ ಮೈಸೂರು ಸ್ಯಾಂಡಲ್ ಸೋಪ್‍ಗೆ ದೀರ್ಘ ಇತಿಹಾಸ, ಪರಂಪರೆಯಿದೆ. ಪ್ರತಿಯೊಬ್ಬ ಕನ್ನಡಿಗರು ಅದರ ರಾಯಭಾರಿಗಳಾಗಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜಗತ್ತಿಗೆ ಪರಿಚಯಿಸಲು ರಾಯಭಾರಿಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಆಪಲ್ ಬಹಳ ಯಶಸ್ವಿ ಉದ್ಯಮವಾಗಿ ಬೆಳೆದಿದೆ. ಆದರೆ, ಅದಕ್ಕೆ ಸಂಭಾವನೆ ನೀಡಿ ನೇಮಿಸಿದ ರಾಯಭಾರಿಯ ಅಗತ್ಯ ಇರಲಿಲ್ಲ. ಇತ್ತೀಚೆಗೆ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಮೊಬೈಲ್‍ನಲ್ಲೇ ಎಷ್ಟೋ ಜನ ವಸ್ತುಗಳ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.
ಒಂದು ವಸ್ತುವನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಹತ್ತಾರು ದಾರಿಗಳಿರುತ್ತವೆ. ಇಂತಹ ಕಾಲಘಟ್ಟದಲ್ಲಿ ಮೈಸೂರು ಸ್ಯಾಂಡಲ್ ಸೋಪ್‍ಗೆ ರಾಯಭಾರಿ ನೇಮಕ ಮಾಡಿ ಪ್ರಚಾರ ಮಾಡುವ ಅವಶ್ಯಕತೆಯಿಲ್ಲ. ಇವರು ಜನರ ತೆರಿಗೆ ಹಣ ವ್ಯರ್ಥ ಮಾಡುತ್ತಿದ್ದಾರೆ ಅಷ್ಟೇ. ಮತ್ತೇನೂ ಇಲ್ಲ ಎಂದು ಅವರು ಟೀಕಿಸಿದ್ದಾರೆ.
ಸೆಲೆಬ್ರಿಟಿಗಳು ಏನನ್ನು ಬಳಸುತ್ತಾರೆ ಎಂದು ನೋಡಿಕೊಂಡು ಆ ವಸ್ತುಗಳನ್ನು ಜನರು ಕೊಂಡುಕೊಳ್ಳುವುದಿಲ್ಲ. ಈಗ ಜನ ಬದಲಾಗುತ್ತಿದ್ದಾರೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಲ್ಲವೂ ತಿಳಿದಿದೆ. ನಾವು ಸೋಪ್ ಬಳಸಿದರೆ ನಟಿಯ ರೀತಿ ಆಗುವುದಿಲ್ಲ ಎಂಬುದು ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ತಿಳಿಸಿರುವ ರಮ್ಯಾ, ಯಾವುದಾದರೂ ಉತ್ಪನ್ನವನ್ನು ಜನ ಮೆಚ್ಚಿ ಖರೀದಿಸಿ ಬಳಸಬೇಕೆಂದರೆ ಆ ವಸ್ತು ಗುಣಮಟ್ಟದ್ದಾಗಿರಬೇಕು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ | ಸರಕಾರ ಜನರ ತೆರಿಗೆ ಹಣ ವ್ಯರ್ಥ ಮಾಡುತ್ತಿದೆ ಎಂದು ನಟಿ ರಮ್ಯಾ ಟೀಕೆ
WhatsApp Group
Join Now