ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ (Central Government) ಪ್ರಮುಖ ಯೋಜನೆಯಾದ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ (Ujjwala scheme) ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಅನಿಲ ದರಗಳ ಏರಿಕೆ ಹಾಗೂ ತೈಲ ಕಂಪನಿಗಳ ನಷ್ಟದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಡಿ ((Ujjwala scheme) ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ಗಳ (Subsidy on Cylinder) ವಾರ್ಷಿಕ ಕೋಟಾವನ್ನು 9 ರಿಂದ 4ಕ್ಕೆ ಕಡಿತಗೊಳಿಸಿದೆ.
ಕಡಿತಕ್ಕೆ ಕಾರಣವೇನು.?
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ಎಲ್‌ಪಿಜಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಸೌದಿ ಕಾಂಟ್ರಾಕ್ಟ್ ಪ್ರೈಸ್ ಮುಂತಾದ ಜಾಗತಿಕ ಮಾನದಂಡಗಳ ಪ್ರಕಾರ ಎಲ್‌ಪಿಜಿ ಬೆಲೆಯು ಕಳೆದ ಫೆಬ್ರವರಿಯಿಂದ ಶೇಕಡಾ 46 ರಷ್ಟು ಹೆಚ್ಚಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಗೃಹಬಳಕೆಯ ಸಿಲಿಂಡರ್ ಪೂರೈಸಲು ಸರ್ಕಾರಕ್ಕೆ ತಗಲುವ ನೈಜ ವೆಚ್ಚ 1,600 ರೂಪಾಯಿ ದಾಟಿದೆ. ಇದರಿಂದಾಗಿ ಸಾರ್ವಜನಿಕ ವಲಯದ ತೈಲ ಮಾರ್ಕೆಟಿಂಗ್ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೆ ಸುಮಾರು 700 ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿವೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಮತ್ತು ಸಬ್ಸಿಡಿ ವೆಚ್ಚವನ್ನು ನಿಯಂತ್ರಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಬಳಕೆಯ ಆಧಾರದ ಮೇಲೆ ತೀರ್ಮಾನ
ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖಾನೂಜಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳ ಸರಾಸರಿ ವಾರ್ಷಿಕ ಬಳಕೆ ಕೇವಲ 4 ರಿಂದ 5 ಸಿಲಿಂಡರ್‌ಗಳು ಮಾತ್ರ ಇರುತ್ತದೆ. ಹಾಗಾಗಿ ಸಾಮಾನ್ಯ ಬಳಕೆಯ ಪ್ರಮಾಣಕ್ಕೆ ಅನುಗುಣವಾಗಿಯೇ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಮರುನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 2016ರಲ್ಲಿ ಈ ಯೋಜನೆ ಆರಂಭವಾದಾಗ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ಇತ್ತು. ಅದನ್ನು ಕಳೆದ ವರ್ಷ 9 ಕ್ಕೆ ಇಳಿಸಲಾಗಿತ್ತು, ಈಗ ಅದನ್ನು ಮತ್ತಷ್ಟು ಕಡಿತಗೊಳಿಸಿ ಕೇವಲ 4 ಸಿಲಿಂಡರ್‌ಗಳಿಗೆ ಸೀಮಿತಗೊಳಿಸಲಾಗಿದೆ.
ಗ್ರಾಹಕರ ಜೇಬಿಗೆ ಎಷ್ಟು ಹೊರೆ.?
ಇತ್ತೀಚೆಗಷ್ಟೇ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 29 ರೂಪಾಯಿ ಹೆಚ್ಚಿಸಲಾಗಿದ್ದು, ಸದ್ಯ ದೆಹಲಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ಸಿಲಿಂಡರ್ ಬೆಲೆ 942 ರೂಪಾಯಿ ಆಗಿದೆ. ಉಜ್ವಲ ಯೋಜನೆಯ ಗ್ರಾಹಕರಿಗೆ ಪ್ರತಿ ಸಿಲಿಂಡರ್ ಮೇಲೆ ಸಿಗುವ 300 ರೂಪಾಯಿ ನೇರ ನಗದು ಸಬ್ಸಿಡಿ (ಡಿಬಿಟಿ) ಮುಂದುವರಿಯಲಿದ್ದು, ಅವರು 642 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ, ಈ 300 ರೂಪಾಯಿ ಸಬ್ಸಿಡಿಯು ಇನ್ಮುಂದೆ ವರ್ಷದ ಮೊದಲ 4 ಸಿಲಿಂಡರ್ ಖರೀದಿಗಳಿಗೆ ಮಾತ್ರ ಅನ್ವಯಿಸಲಿದ್ದು, ಆ ನಂತರದ ಸಿಲಿಂಡರ್‌ಗಳಿಗೆ ಉಜ್ವಲ ಗ್ರಾಹಕರು ಕೂಡ ಪೂರ್ಣ ಮೊತ್ತವನ್ನು ತೆರಬೇಕಾಗುತ್ತದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿಲ ಬೆಲೆಗಳು ಗಗನಕ್ಕೇರಿದ್ದರೂ, ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಗ್ರಾಹಕರಿಗೆ ಇನ್ನೂ ಕಡಿಮೆ ದರದಲ್ಲೇ ಅಡುಗೆ ಅನಿಲ ಸಿಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯಲ್ಲಿ ಮಾಡಲಾಗಿರುವ ಈ ದಿಢೀರ್ ಕಡಿತವು ದೇಶದ ಕೋಟ್ಯಂತರ ಬಡ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.