ವಿರಾಟ್ ಕೊಹ್ಲಿ ನೋಡಲು ಕಾಯುತ್ತಿರುವ ಆರ್‌ಸಿಬಿ ಫ್ಯಾನ್ಸ್‌ಗೆ ವರುಣನ ಆತಂಕ! ಬೆಂಗಳೂರಿನಲ್ಲಿ ಇಂದು ಬಿರುಸಿನ ಮಳೆ ಸಾಧ್ಯತೆ.!

Spread the love

ಕ್ರಿಕೆಟ್ ದಂತಕಥೆ, ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್, ‘ದಾಖಲೆಗಳ ಸರದಾರ’, ‘ರನ್ ಮಷಿನ್’, ‘ಕಿಂಗ್’ ಎಂದೆಲ್ಲ ಕ್ರಿಕೆಟ್ ವಲಯದಿಂದ ಕರೆಯಲ್ಪಡುವ ಏಕೈಕ ಆಟಗಾರ ಯಾರಾದರೂ ಇದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ. ತಮ್ಮ ಬ್ಯಾಟ್‌ನಿಂದ ಕೇವಲ ರನ್‌ಗಳ ಹೊಳೆ ಹರಿಸುವುದು ಮಾತ್ರವಲ್ಲದೇ ಆಟದ ವೈಖರಿಯನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ಯುವುದು ಕೊಹ್ಲಿ ವಿಶೇಷತೆ.

ಹುರುಪಿನಿಂದ, ಚೀರಾಟದಿಂದ ಎದುರಾಳಿಯನ್ನು ಆಟದಲ್ಲಿ ಕೆಣಕುವ ವಿರಾಟ್, ಪ್ರತಿಕ್ರಿಯೆಗಳಿಗೆ ತಕ್ಕಂತ ಅದ್ಭುತ ಹಾಗೂ ರಣರೋಚಕ ಪ್ರದರ್ಶನವನ್ನೇ ನೀಡುತ್ತಾರೆ. ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಕೊಹ್ಲಿಗೆ ಇದೀಗ ವಿಶೇಷ ಗೌರವ ಸಲ್ಲಿಸಲು ಫ್ಯಾನ್ಸ್ ಭರ್ಜರಿ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ಇಂದು (ಮೇ.17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಮೊದಲ ಐಪಿಎಲ್ ಪುನಾರಂಭ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದು, ನಂ.18 ಟೆಸ್ಟ್ ಜೆರ್ಸಿ ತೊಡುವ ಮೂಲಕ ಕಿಂಗ್ ಕೊಹ್ಲಿಗೆ ಗೌರವ ಸೂಚಿಸಲು ಎದುರುನೋಡುತ್ತಿದ್ದಾರೆ. ಒಂದೆಡೆ ಕೊಹ್ಲಿ ಅವರ ನಂ.18 ಟೆಸ್ಟ್ ಜೆರ್ಸಿಗಳು ಭರ್ಜರಿ ಮಾರಾಟ ಕಂಡಿದ್ದೇ ಆದರೂ ಅಭಿಮಾನಿಗಳ ಉತ್ಸಾಹಕ್ಕೆ ಕೊಡಲಿ ಪೆಟ್ಟು ಬೀಳುವ ಸಾಧ್ಯತೆಗಳು ಗೋಚರಿಸಿವೆ.

ಇದಕ್ಕೆ ಕಾರಣ, ಮಳೆರಾಯ. ಮುಂದಿನ ಎರಡು ದಿನಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ಪ್ರಕಟಿಸಿದೆ. ಅಂತೆಯೇ, ಇಂದು ಸಂಜೆ 6ರ ನಂತರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ. ಗುಡುಗು ಸಹಿತ ಧಾರಕಾರ ಮಳೆ ಸುರಿಯುವ ನಿರೀಕ್ಷೆಯಿದೆ.

ಈ ಸುದ್ದಿ ಆರ್ಸಿಬಿ ಮತ್ತು ಕೆಕೆಆರ್ ಪಂದ್ಯಕ್ಕೆ ಅಡ್ಡಿಪಡಿಸುವುದರ ಜೊತೆಗೆ ಅಪ್ಪಟ ಬೆಂಗಳೂರು ಮತ್ತು ಕೊಹ್ಲಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಲಿದೆ. ಬಿಳಿ ಜೆರ್ಸಿ ತೊಟ್ಟು ವಿರಾಟ್ ಕೊಹ್ಲಿಗೆ ಗೌರವ ಸೂಚಿಸಬೇಕೆಂದು ಆಸೆ ವ್ಯಕ್ತಪಡಿಸಿರುವ ಫ್ಯಾನ್ಸ್ಗೆ ಪ್ರಾಯಶಃ ನಿರಾಶೆ ಉಂಟಾಗಬಹುದು.

WhatsApp Group Join Now

Spread the love

Leave a Reply