ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆಗಳ ಹಂಚಿಕೆಯಾಗುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ (Congress) ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದೆ. ತಮಗೆ ನೀಡಿರುವ ಖಾತೆಯ ಬಗ್ಗೆ ಅಸಮಾಧಾನಗೊಂಡು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿರ್ಧಾರ ಇದೀಗ ನೇರವಾಗಿ ದೆಹಲಿ ನಾಯಕರ ಅಂಗಳ ತಲುಪಿದೆ.
ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಈ ಬಂಡಾಯದ ಬಿಸಿ ಎದುರಿಸಿದ ಕಾಂಗ್ರೆಸ್ ಅಗ್ರ ನಾಯಕ ರಾಹಲ್ ಗಾಂಧಿ ಅವರು ಬಿಕ್ಕಟ್ಟು ಶಮನಕ್ಕೆ ಖಡಕ್ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಸ್ತುವಾರಿ ಸುರ್ಜೇವಾಲಾಗೆ ಮಹತ್ವದ ಜವಾಬ್ದಾರಿ
ರಾಮಲಿಂಗಾರೆಡ್ಡಿ ಅವರ ಹಠಾತ್ ರಾಜೀನಾಮೆಯ ಬೆಳವಣಿಗೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಂಜಾನೆಯೇ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ರಾಹುಲ್ ಗಾಂಧಿ, ಹಿರಿಯ ನಾಯಕರನ್ನು ಕಳೆದುಕೊಳ್ಳದಂತೆ ಸೂಚಿಸಿದ್ದಾರೆ. ಹಾಗೆಯೇ, ತಕ್ಷಣವೇ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಪ್ರಕ್ರಿಯೆ ಆರಂಭಿಸಿ, ಅವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವ ಜವಾಬ್ದಾರಿಯನ್ನು ಸುರ್ಜೇವಾಲಾ ಹೆಗಲಿಗೆ ವಹಿಸಿದ್ದಾರೆ.
ಹೈಕಮಾಂಡ್ ಕಠಿಣ ನಿಲುವು!
ರಾಜೀನಾಮೆ ವಾಪಸ್ ಪಡೆಯಲು ಒಂದು ಬಾರಿ ಗಂಭೀರ ಪ್ರಯತ್ನ ನಡೆಸಿ, ಆದರೂ ಅವರು ತಮ್ಮ ಪಟ್ಟು ಸಡಿಲಿಸದಿದ್ದರೆ ಯಾವುದೇ ಮುಲಾಜಿಲ್ಲದೆ ಅವರ ರಾಜೀನಾಮೆಯನ್ನು ಅಂಗೀಕರಿಸಿ ಎಂದು ರಾಹುಲ್ ಗಾಂಧಿ ಹೈಕಮಾಂಡ್ ನಾಯಕರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಖಾತೆ ಅಸಮಾಧಾನದ ಹೆಸರಿನಲ್ಲಿ ಒಮ್ಮೆ ನಾಯಕರಿಗೆ ಮಣಿದರೆ, ಮುಂಬರುವ ದಿನಗಳಲ್ಲಿ ಉಳಿದ ಸಚಿವರೂ ಇದೇ ಹಾದಿ ಹಿಡಿದು ಸರ್ಕಾರಕ್ಕೆ ಮುಜುಗರ ತರಬಹುದು ಎಂಬ ದೂರದೃಷ್ಟಿಯಿಂದ ಹೈಕಮಾಂಡ್ ಈ ಕಠಿಣ ನಿಲುವು ತಳೆದಿದೆ ಎನ್ನಲಾಗುತ್ತಿದೆ.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಅವರ ಎಂಟ್ರಿಯಾಗುತ್ತಿದ್ದಂತೆಯೇ ಡ್ಯಾಮೇಜ್ ಕಂಟ್ರೋಲ್ ಕಸರತ್ತು ಬಿರುಸುಗೊಂಡಿದೆ. ಏರ್‌ಪೋರ್ಟ್‌ನಲ್ಲೇ ಹೈಕಮಾಂಡ್ ನಾಯಕರು ಹಾಗೂ ರಾಜ್ಯದ ಪ್ರಮುಖ ಹಿರಿಯ ಸಚಿವರೊಂದಿಗೆ ರಾಹುಲ್ ಗಾಂಧಿ ಅವರು ತುರ್ತು ಸಮಾಲೋಚನೆ ನಡೆಸಿದರು. ಕೆಲವು ಕಾಲ ನಡೆದ ಈ ಆಪ್ತ ಸಭೆಯಲ್ಲಿ, ಖಾತೆ ಹಂಚಿಕೆ ಗೊಂದಲದಿಂದ ಸೃಷ್ಟಿಯಾಗಿರುವ ಆಂತರಿಕ ಅಸಮಾಧಾನಕ್ಕೆ ತಕ್ಷಣವೇ ಬ್ರೇಕ್ ಹಾಕಲು ಹೈಕಮಾಂಡ್ ನಾಯಕರು ಸೂತ್ರಗಳನ್ನು ಸಿದ್ಧಪಡಿಸಿದ್ದಾರೆ.
ಮನವೊಲಿಕೆಗೆ ಮಣಿಯದಿದ್ದರೆ ಮುಲಾಜಿಲ್ಲದೇ ರಾಜೀನಾಮೆ ಅಂಗೀಕರಿಸಿ: ಖಡಕ್ ಸಂದೇಶ ರವಾನಿಸಿದ್ರಾ ರಾಗಾ.?
WhatsApp Group
Join Now