ಬಿಜೆಪಿ ನಾಯಕರ ಮಕ್ಕಳು ಕೇಸರಿ ಶಾಲು ಹಾಕಿ ಶಾಲೆಗೆ ಹೋಗ್ತಾರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಹಿಜಾಬ್ ಗೆ ಅವಕಾಶ ನೀಡಿದ ವಿಚಾರವಾಗಿ ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಬಿಜೆಪಿಯವರಿಗೆ ಬೇರೆ ಏನು ಕೆಲಸ ಇದೆ ಹೇಳಿ. ಅವರ ಧಾರ್ಮಿಕತೆ, ಸಂಪ್ರದಾಯ ಗೌರವಿಸಬೇಕು. ಕೇಸರಿ ಶಾಲು ಹಾಕಿಕೊಂಡ್ರೆ ಕೆಲಸ ಸಿಕ್ಕಿಬಿಡುತ್ತಾ? ಅವರ ಮಕ್ಕಳು ಮಾತ್ರ ಫಾರಿನ್ ನಲ್ಲಿ ಓದುತ್ತಾರೆ. ಬಿಜೆಪಿಯ ಎಷ್ಟು ನಾಯಕರ ಮಕ್ಕಳಿಗೆ ಹನುಮಾನ್ ಚಾಲೀಸಾ ಬರುತ್ತೆ ಹೇಳಲಿ? ಎಂದು ಸವಾಲು ಹಾಕಿದರು.
ಹಿಜಾಬ್ ಕುರಿತಾಗಿ ರಾಜ್ಯ ಸರ್ಕಾರದ ಆದೇಶವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಲಿ. ಮುಸ್ಲಿಮರು ಜನಿವಾರ ಹಾಕ್ತಾರಾ? ಹಿಂದುಗಳಲ್ವಾ ಹಾಕೋದು. ಕುಂಕುಮ ಇಡ್ತಾರಲ್ಲಾ ಅದನ್ನು ಬ್ಯಾನ್ ಮಾಡೋಕೆ ಆಗುತ್ತಾ? ಅವರವರ ಸಂಪ್ರದಾಯ ಗೌರವಿಸಬೇಕು. ಎಲ್ಲಾ ಧರ್ಮಗಳಿಗೆ ಅವರದ್ದೇ ಆದ ಆಚರಣೆಗಳನ್ನು ಪಾಲಿಸಲು ಸಂವಿಧಾನ ಅವಕಾಶ ನೀಡಿದೆ ಎಂದರು.
ಒಂದೇ ಧರ್ಮಕ್ಕೆ ನಾವು ನಿಯಮ ಮಾಡಿಲ್ಲ. ಮುಸ್ಲಿಮರು ಜನಿವಾರ ತಿಲಕ, ಬೂದಿ, ಕುಂಕುಮ ಹಾಕ್ತಾರಾ? ಮೋದಿ ಕಾರ್ಯವೈಖರಿ ಮುಚ್ಚಿಡಲು ಇದನ್ನೆಲ್ಲಾ ಮಾಡುತ್ತಿದ್ದಾರೆ. ಬಿಜೆಪಿಗರು ಫಸ್ಟ್ ಆರ್ಡರ್ ಓದುವುದನ್ನು ಕಲಿಯಲಿ. ಶಾಲೆ ತೆರೆದಿರುವುದು ಮಕ್ಕಳ ಭವಿಷ್ಯಕ್ಕಾಗಿ. ಮಕ್ಕಳ ಭವಿಷ್ಯ ಯಾಕೆ ಹಾಳು ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದರು.
ಮನೆಯಲ್ಲಿ ಎಲ್ಲ ಆಚರಣೆ ಕಲಿಸುತ್ತಾರೆ. ಶಾಲೆಯಲ್ಲಿ ವಿಧ್ಯಾಭ್ಯಾಸ ಕಲಿಸಲಾಗುತ್ತದೆ. ನಮ್ಮ ಸಮಾಜವನ್ನು ಇನ್ನೂ ಹಿಂದಕ್ಕೆ ತೆಗೆದುಕೊಂಡು ಹೋಗ ಬೇಕು ಅಂತಿದ್ದಾರೆ. ಎಲ್ಲ ಧರ್ಮಗಳ ಆಚರಣೆ ಮನೆಯಲ್ಲೆ ಇರಲಿ ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿ. ಸಂವಿಧಾನದ ಅಂಶವನ್ನು ನಾವು ಪುನರ್ ಉಚ್ಚರಣೆ ಮಾಡಿದ್ದೇನೆ ಎಂದು ಹೇಳಿದರು.
ಗೋ ರಕ್ಷಣೆ, ಧರ್ಮ ರಕ್ಷಣೆ ಮಾಡಿದ್ರೆ ಉದ್ಯೋಗ ನೀಡಿದ ಹಾಗಾಗುತ್ತಾ? ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೇಕು. ಚೀನಾ ದೇಶವನ್ನು ನೋಡಿ ಕಲಿಯಲಿ. ಅವರ ಮಕ್ಕಳು ಹೇಗೆ ಕಲಿಯುತ್ತಿದ್ದಾರೆ ಎಂದು ನೋಡಿ ಮಾತನಾಡಲಿ. ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಬಿಜೆಪಿ ಮಾತನಾಡುತ್ತಾ? ಪ್ರಧಾನಿ ನರೇಂದ್ರ ಮೋದಿ ಎಷ್ಟು ಯುನಿವರ್ಸಿಟಿ ಕಟ್ಟಿದ್ದಾರೆ. ಬರಿ ಶಾಲು ಹಾಕಿ ಅಂತಾರೆ, ಇದರಿಂದ ಉದ್ಯೋಗ ಸಿಗುತ್ತಾ? ಎಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿಗರ ಮಕ್ಕಳು ಉತ್ತಮವಾದ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು. ನಿಮ್ಮ ಮಕ್ಕಳು ಶಾಲು ಹಾಕ್ತಾರಾ? ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ವಿವಾದ ಆರಂಭಗೊಂಡಿತ್ತು. ಉಡುಪಿಯಲ್ಲಿ ಶುರುವಾದ ವಿವಾದ ಇದೀಗ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಇದೇ ಸಂದರ್ಭದಲ್ಲಿ ಹಿಜಾಬ್ ಗೆ ಸರ್ಕಾರ ನಿಷೇಧ ಹೇರಿತ್ತು. ಹಿಜಾಬ್ ನಿಷೇಧದ ವಿರುದ್ದ ಮುಸ್ಲಿಂ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಆದರೆ ಹೈಕೋರ್ಟ್ ಸರ್ಕಾರದ ನಿಲುವಿನ ಪರವಾದ ತೀರ್ಪು ನೀಡಿತ್ತು.
ಈ ನಡುವೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಹಿಜಾಬ್ ಪರ ಹಾಗೂ ವಿರುದ್ಧ ಅಭಿಪ್ರಾಯವನ್ನು ಇಬ್ಬರು ನ್ಯಾಯಾಧೀಶರು ನೀಡಿದ್ದರು. ಬಳಿಕ ವಿಸ್ತ್ರತ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದೀಗ ವಿಚಾರಣೆ ನಡೆಯಬೇಕಾಗಿದೆ.