ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಹುಷಾರ್ ಎಂದ ಪೊಲೀಸ್‌ ಅಧಿಕಾರಿ, ಠಾಣೆಗೆ ನುಗ್ಗೋದಾಗಿ ಪ್ರತಾಪ್‌ ಸಿಂಹ ಎಚ್ಚರಿಕೆ!

Spread the love

ಮೈಸೂರು: ಜಿಲ್ಲೆಯ ಟಿ. ನರಸೀಪುರ ಪೊಲೀಸ್ ವೃತ್ತ ನಿರೀಕ್ಷಕರಾದ ಧನಂಜಯ್ ಅವರು ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ವಿವಾದಾತ್ಮಕ ಮಾತುಗಳು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿವೆ.

ಮುಂಬರುವ ಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಸಿರುವ ಹಿಂದೂ ಯುವಕರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಎಚ್ಚರಿಕೆಯ ಧ್ವನಿಯಲ್ಲಿ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ತೀವ್ರವಾದ ಚರ್ಚೆಗೆ ಮತ್ತು ಆಕ್ರೋಶಕ್ಕೆ ಗ್ರಾಸವಾಗಿದೆ. ಮಸೀದಿಗಳ ಮುಂಭಾಗದ ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಅಥವಾ ಹಬ್ಬದ ಮೆರವಣಿಗೆಗಳು ಸಾಗುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನು ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಕೇವಲ ಮೌಖಿಕ ಎಚ್ಚರಿಕೆಗೆ ಸೀಮಿತವಾಗದೆ, ಒಂದು ವೇಳೆ ಯಾರಾದರೂ ನಿಯಮ ಮೀರಿ ಮಸೀದಿಗಳ ಹತ್ತಿರ ಪಟಾಕಿಗಳನ್ನು ಸಿಡಿಸಿದರೆ ಅಥವಾ ಮೆರವಣಿಗೆ ನಡೆಸಿದರೆ ಅವರ ‘ಗ್ರಹಚಾರ ಬಿಡಿಸುವುದಾಗಿ’ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ದರ್ಪದ ಧೋರಣೆಯು ಸ್ಥಳೀಯ ಹಿಂದೂ ಯುವಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಈ ವಿವಾದಾತ್ಮಕ ಹೇಳಿಕೆಯು ಹೊರಬರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲೂ ತೀವ್ರ ಕೋಲಾಹಲ ಉಂಟಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದು, ಇನ್ಸ್‌ಪೆಕ್ಟರ್ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪೊಲೀಸ್ ಠಾಣೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ ಪ್ರತಾಪ್‌ ಸಿಂಹ

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಒಬ್ಬ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿರಬೇಕಾದ ಧನಂಜಯ್ ಅವರು ರಸ್ತೆ ಬದಿಯ ಪುಂಡರಂತೆ, ಎಚ್ಚರಿಕೆಯ ಹೆಸರಿನಲ್ಲಿ ವೀರಾವೇಶದಿಂದ ಮಾತನಾಡಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಇಲಾಖೆಯ ಅಧಿಕಾರಿಯೊಬ್ಬರು ಈ ರೀತಿಯ ಅಸಂವಿಧಾನಿಕ ಹಾಗೂ ಏಕಪಕ್ಷೀಯ ಭಾಷೆಯನ್ನು ಬಳಸುವುದು ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಮುಂದೆಯೂ ಕೂಡ ಪೊಲೀಸ್ ಅಧಿಕಾರಿಯು ಇದೇ ರೀತಿಯ ಧೋರಣೆಯನ್ನು ಮುಂದುವರಿಸಿದರೆ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ, ತಾವು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಹಬ್ಬದ ವಾತಾವರಣದಲ್ಲಿ ಪೊಲೀಸರ ಈ ನಡೆ ಹಾಗೂ ರಾಜಕೀಯ ನಾಯಕರ ತಿರುಗೇಟು ಮೈಸೂರು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಬಿಗುವಿನ ಪರಿಸ್ಥಿತಿಗೆ ಕಾರಣವಾಗಿದೆ.

ಪೊಲೀಸ್‌ ಅಧಿಕಾರಿ ಹೇಳಿದ್ದೇನು?

ಇನ್ನು ಶಾಂತಿ ಸಭೆಯಂತಹ ಸೌಹಾರ್ದಯುತ ಸಭೆಯಲ್ಲಿ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯೊಬ್ಬರು ಈ ರೀತಿಯ ಬೆದರಿಕೆಯೊಡ್ಡುವ ಭಾಷೆಯನ್ನು ಬಳಸಿರುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಮೆರವಣಿಗೆಯ ಹಾದಿಯನ್ನು ಮೊದಲೇ ನಿರ್ಧರಿಸಿ ನಿಖರವಾದ ಮಾರ್ಗಸೂಚಿಯ ಪಟ್ಟಿಯನ್ನು ನೀಡಬೇಕು ಮತ್ತು ಪೂರ್ವಾನುಮತಿ ಪಡೆದ ರೂಟ್‌ನಲ್ಲಿ ಮಾತ್ರ ಗಣಪತಿ ಮೆರವಣಿಗೆಯನ್ನು ಸಾಗಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ಇದರ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಹಬ್ಬದ ಆಚರಣೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿರುವ ಹೈ-ಟೆಕ್ ಡಿಜೆ ಧ್ವನಿವರ್ಧಕಗಳು ಅಥವಾ ದೊಡ್ಡ ಮಟ್ಟದ ಸ್ಪೀಕರ್‌ಗಳ ಬಳಕೆಗೆ ಸಂಪೂರ್ಣ ನಿಷೇಧವಿದೆ ಎಂದು ಧನಂಜಯ್ ಅವರು ಸ್ಪಷ್ಟಪಡಿಸಿದ್ದಾರೆ. ಮಸೀದಿಗಳ ಬಳಿ ಸೂಕ್ತವಾದ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸುವ ಭರದಲ್ಲಿ ಅವರು ಬಳಸಿದ ಪದಬಳಕೆ ಹಾಗೂ ಎಚ್ಚರಿಕೆಯ ಧಾಟಿಯು ಸಮುದಾಯಗಳ ನಡುವೆ ಅಶಾಂತಿ ಉಂಟುಮಾಡುವಂತಿದೆ ಎಂದು ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

WhatsApp Group Join Now

Spread the love

Leave a Reply