ಪ್ರಧಾನಿ ಮೋದಿಗೆ 12 ವರ್ಷ : ‘ಮೆಲೋನಿಗೆ ಮೆಲೋಡಿ ಚಾಕೊಲೇಟ್ ಕೊಟ್ಟಿದ್ದೇ ಸಾಧನೆ’ ಎಂದು ಶಾಸಕ ಪ್ರದೀಪ್ ಈಶ್ವರ್ ಲೇವಡಿ!

Spread the love

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇಂದಿಗೆ 12 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯವರ 12 ವರ್ಷಗಳ ಆಡಳಿತವನ್ನು ಕಟುವಾದ ಶಬ್ದಗಳಲ್ಲಿ ವ್ಯಂಗ್ಯವಾಡಿದ್ದಾರೆ.

ಕಳೆದ 12 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ಸಾಧನೆಗಳು ನಿಜಕ್ಕೂ ಜಾಸ್ತಿ ಇವೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೋಡಿ’ ಚಾಕೊಲೇಟ್ ಕೊಟ್ಟಿದ್ದೇ ಇವರ ಮೊದಲನೇ ಸಾಧನೆ. ಮೆಲೋಡಿ ಕೊಟ್ಟಂತಹ ಇಂಥ ಕಿಲಾಡಿಗೆ ನನ್ನ ಕಡೆಯಿಂದ 12ನೇ ವರ್ಷದ ಶುಭಾಶಯಗಳು,” ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದರು.

ಮುಂದುವರಿದು ಮಾತನಾಡಿದ ಅವರು, ‘ಮೋದಿ ಆಡಳಿತದಲ್ಲಿ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ವಿದೇಶಿ ಸಾಲ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ಗಗನಕ್ಕೆ ಏರಿಸಿದ್ದೇ ಇವರ ಸಾಧನೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕ್ತೀನಿ ಎಂದಿದ್ದರು, ಆದರೆ ಇದುವರೆಗೆ 15 ಪೈಸೆನೂ ಬರಲಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರಗಳು ದೇಶದಲ್ಲಿ ವಿವಿಧ ಯೋಜನೆಗಳಿಗೆ ಇಟ್ಟಿದ್ದ ಹೆಸರುಗಳನ್ನು ಬದಲಾಯಿಸಿ, ಹೊಸ ನಾಮಕರಣ ಮಾಡುವುದರಲ್ಲೇ ಮೋದಿ ಕಾಲ ಕಳೆದಿದ್ದಾರೆ’ ಎಂದು ಕಿಡಿಕಾರಿದರು.

ಮೋದಿ ಬೆಂಬಲಿಗರ ವಿರುದ್ಧವೂ ವಾಗ್ದಾಳಿ ನಡೆಸಿದ ಶಾಸಕರು, “ಮೋದಿಯವರ ಅಂಧಭಕ್ತರು ಈ ದೇಶಕ್ಕೆ ಅತ್ಯಂತ ಹಾನಿಕಾರಕ. ಇಂಥ 300-400 ಜನರ ಅಂಧಭಕ್ತರು ಅಸಲಿ ದೇಶದ್ರೋಹಿಗಳು. ಲೋಕಸಭಾ ಚುನಾವಣೆಯಲ್ಲಿ ಮೋದಿ ‘ಚಾರ್ ಸೌ ಪಾರ್’ ಎಂದಿದ್ದರು, ಆದರೆ ಅವರಿಗೆ ‘ತೀನ್ ಸೌ’ (300) ಸ್ಥಾನಗಳನ್ನೂ ದಾಟಲು ಸಾಧ್ಯವಾಗಲಿಲ್ಲ. ಮೋದಿ ಇನ್ನು ಕೇವಲ ಮೂರು ವರ್ಷ ಇರಬಹುದು ಅಷ್ಟೆ. ಮೈತ್ರಿ ಮಾಡಿಕೊಂಡಿರುವ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರಿಗೆ ಯಾವಾಗ ಕೋಪ ಬರುತ್ತದೋ, ಯಾವಾಗ ಸರ್ಕಾರ ಬೀಳುತ್ತದೋ ಗೊತ್ತಿಲ್ಲ. 2029ರ ಚುನಾವಣೆಯಲ್ಲಿ ಖಂಡಿತವಾಗಿಯೂ ‘ಇಂಡಿಯಾ’ ಕೂಟ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲಿದ್ದಾರೆ,” ಎಂದು ಭವಿಷ್ಯ ನುಡಿದರು.

WhatsApp Group Join Now

Spread the love

Leave a Reply