ನಟ ದರ್ಶನ್ (Darshan) ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡರ (Mallikarjun Sankanagoudar) ನಾಪತ್ತೆ ಪ್ರಕರಣಕ್ಕೆ (Missing Case) ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ ಕೆಲವು ವರ್ಷಗಳಿಂದ ಯಾರಿಗೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ ಅವರು ಇದೀಗ ದಿಢೀರನೆ ಪ್ರತ್ಯಕ್ಷವಾಗಿದ್ದು, ತಾವು ಎಲ್ಲಿದ್ದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಾಗ ದರ್ಶನ್ ಅವರ ಹಳೆಯ ಮ್ಯಾನೇಜರ್ ಮಲ್ಲಿಕಾರ್ಜುನ ಅವರ ವಿಷಯವೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅವರು ಕೂಡ ಕೊಲೆಯಾಗಿರಬಹುದು ಅಥವಾ ಅವರನ್ನು ಯಾರೋ ಸಂಚು ಮಾಡಿ ಮಾಯ ಮಾಡಿದ್ದಾರೆ ಎಂಬ ಅನೇಕ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ನಾಪತ್ತೆ ಬಗ್ಗೆ ತನಿಖೆಯಾಗಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಆದರೆ ಈಗ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಮಲ್ಲಿಕಾರ್ಜುನ ಅವರೇ ಮಾಧ್ಯಮಗಳ ಮುಂದೆ ಬಂದಿದ್ದಾರೆ.
ತಮ್ಮ ನಾಪತ್ತೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ವೈಯಕ್ತಿಕ ಕಾರಣಗಳು ಮತ್ತು ಸಿನಿಮಾದಲ್ಲಿನ ಹಣಕಾಸಿನ ನಷ್ಟದಿಂದಾಗಿ ನಾನು ತಾತ್ಕಾಲಿಕವಾಗಿ ಬೆಂಗಳೂರನ್ನು ಬಿಟ್ಟು ದೂರ ಹೋಗಿದ್ದೆ ಎಂದು ತಿಳಿಸಿದ್ದಾರೆ. 18 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ, ನಿರ್ಮಾಪಕ ಹಾಗೂ ವಿತರಕನಾಗಿ ಕೆಲಸ ಮಾಡಿರುವ ಅವರು, ಅನಿವಾರ್ಯ ಪರಿಸ್ಥಿತಿಯಿಂದಾಗಿ ಕೆಲವು ವರ್ಷಗಳ ಕಾಲ ಯಾರಿಗೂ ಸಿಗದಂತೆ ಬದುಕಬೇಕಾಯಿತು ಎಂದಿದ್ದಾರೆ.
ಇಂದು ಏಪ್ರಿಲ್ 16 ರಂದು ಸುದ್ದಿಗೋಷ್ಠಿ ಕರೆದಿರುವ ಮಲ್ಲಿಕಾರ್ಜುನ ಅವರು, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಈ ವೇಳೆ ದರ್ಶನ್ ಅವರ ಜೊತೆಗಿನ ಒಡನಾಟ ಹಾಗೂ ಹಳೆಯ ವಿವಾದಗಳ ಬಗ್ಗೆಯೂ ಅವರು ಮಾತನಾಡಬಹುದು ಎಂಬ ನಿರೀಕ್ಷೆ ಇದೆ. ಬಹಳ ವರ್ಷಗಳ ನಂತರ ಅವರು ಮರಳಿ ಬಂದಿರುವುದು ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ನಾಪತ್ತೆಯಾಗಿದ್ದ ನಟ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ದಿಢೀರ್ ಪ್ರತ್ಯಕ್ಷ!
WhatsApp Group
Join Now