ಮಹಿಂದ್ರಾ ಥಾರ್ ರಿವರ್ಸ್ ಮಾಡುವಾಗ 5 ವಿದ್ಯಾರ್ಥಿನಿಯರಿಗೆ ಡಿಕ್ಕಿ, ಓರ್ವಬಾಲಕಿ ಸಾವು.!

Spread the love

ರಾಯಚೂರು : ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಂದು ಮಧ್ಯಾಹ್ನ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ರಿವರ್ಸ್ ಮಾಡುವಾಗ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ:

ಸಿಂಧನೂರು ಪಟ್ಟಣದ ಚೇತನ ಆಸ್ಪತ್ರೆಯ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಎವಿಎಸ್ ಬ್ರಿಲಿಯಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಐವರು ವಿದ್ಯಾರ್ಥಿನಿಯರು ಕಾಲೇಜು ಮುಗಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿ ನಿಲ್ಲಿಸಿದ್ದ ಮಹೇಂದ್ರ ಥಾರ್ (Mahindra Thar) ಕಾರನ್ನು ಚಾಲಕ ಏಕಾಏಕಿ ವೇಗವಾಗಿ ರಿವರ್ಸ್ ತೆಗೆದಿದ್ದಾನೆ. ನಿಯಂತ್ರಣ ತಪ್ಪಿದ ಕಾರು ನೇರವಾಗಿ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ.

ಓರ್ವ ಬಲಿ, ಮೂವರಿಗೆ ಗಾಯ:

ಈ ಭೀಕರ ಅಪಘಾತದಲ್ಲಿ ಜವಳಗೇರಾ ಗ್ರಾಮದ ನಿವಾಸಿ ಭೂಮಿಕಾ (17) ಎಂಬ ವಿದ್ಯಾರ್ಥಿನಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಉಳಿದಂತೆ ಮೇಘನಾ (17), ಮಹೇಶ್ವರಿ (17) ಮತ್ತು ಜಹೀದಾ (17) ಎಂಬ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ವಿದ್ಯಾರ್ಥಿನಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ:

ಅಪಘಾತದ ದೃಶ್ಯವು ಚೇತನ ಆಸ್ಪತ್ರೆಯ ಮುಂಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಎಷ್ಟು ವೇಗವಾಗಿ ರಿವರ್ಸ್ ಬಂದಿದೆ ಎಂದರೆ ವಿದ್ಯಾರ್ಥಿನಿಯರಿಗೆ ತಪ್ಪಿಸಿಕೊಳ್ಳಲು ಸಮಯವೇ ಸಿಕ್ಕಿಲ್ಲ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ಚಾಲಕ ಮತ್ತು ಕಾರು ಪೊಲೀಸ್ ವಶಕ್ಕೆ:

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಂಧನೂರು ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಮಹೇಂದ್ರ ಥಾರ್ ಕಾರು ಮತ್ತು ಅದರ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವಿದ್ಯಾರ್ಥಿನಿಯ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.

WhatsApp Group Join Now

Spread the love

Leave a Reply