‘ಇಂಧನ ಬಳಕೆಯಲ್ಲಿ ಮಿತಿಯಿರಲಿ, ವರ್ಷದ ಮಟ್ಟಿಗೆ ಚಿನ್ನ ಖರೀದಿಸಬೇಡಿ..’ ಪ್ರಧಾನಿ ಮೋದಿ ಮಹತ್ವದ ಕರೆ

Spread the love

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮೂಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ.

ಜಾಗತಿಕ ಬಿಕ್ಕಟ್ಟನ್ನು ಎಷ್ಟೇ ನಿಭಾಯಿಸಿದರೂ ಸಾಲದು. ಸಾಧ್ಯವಾದಷ್ಟು ಪೆಟ್ರೋಲ್-ಡೀಸೆಲ್ ಅನ್ನು ಮಿತವಾಗಿ ಬಳಸುವ ಮೂಲಕ ದೇಶದ ಮೀಸಲು ಸಂಪತ್ತನ್ನು ಉಳಿಸಲು ಜನರು ಕೈಜೋಡಿಸಬೇಕು. ತೈಲವನ್ನು ಮಿತವಾಗಿ ಬಳಸಬೇಕು ಮತ್ತು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ನಾಗರಿಕರ ಸಹಕಾರ ಅಗತ್ಯ ಎಂದರು.

ತೈಲ, ಚಿನ್ನದ ಉಳಿತಾಯಕ್ಕೆ ಒತ್ತು:

ಭಾರತದ ಬಳಿ ಬೃಹತ್ ತೈಲ ಬಾವಿಗಳಿಲ್ಲ, ನಾವು ಇಂಧನಕ್ಕಾಗಿ ಆಮದಿನ ಮೇಲೆ ಅವಲಂಬಿತರಾಗಿದ್ದೇವೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅತ್ಯಂತ ಜಾಗರೂಕತೆಯಿಂದ ಬಳಸುವ ಸಮಯ ಬಂದಿದೆ ಎಂದು ಅವರು ಎಚ್ಚರಿಸಿದರು. ಇಂಧನ ಉಳಿತಾಯವು ದೇಶದ ಆರ್ಥಿಕತೆಗೆ ದೊಡ್ಡ ಬಲ ನೀಡಲಿದೆ ಎಂದು ಅವರು ಒತ್ತಿ ಹೇಳಿದರು.

ಇದೇ ವೇಳೆ ಆಮದನ್ನು ಕಡಿಮೆ ಮಾಡುವ ಉದ್ದೇಶದಿಂದ, “ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ” ಎಂಬ ಅಚ್ಚರಿಯ ಮನವಿಯನ್ನು ಪ್ರಧಾನಿ ಮಾಡಿದರು. ಚಿನ್ನದ ಆಮದಿನಿಂದಾಗಿ ದೇಶದ ವಿದೇಶಿ ವಿನಿಮಯದ ಮೇಲೆ ಹೊರೆಯಾಗುತ್ತಿದ್ದು, ದೇಶದ ಆರ್ಥಿಕ ಹಿತದೃಷ್ಟಿಯಿಂದ ಜನರು ಈ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದರು.

‘ವರ್ಕ್ ಫ್ರಂ ಹೋಂಗೆ ಆದ್ಯತೆ’

ಸಾರಿಗೆ ವೆಚ್ಚ ಮತ್ತು ಇಂಧನ ಬಳಕೆಯನ್ನು ತಗ್ಗಿಸಲು ಕಂಪನಿಗಳು ಮತ್ತು ಉದ್ಯೋಗಿಗಳು ‘ವರ್ಕ್ ಫ್ರಮ್ ಹೋಮ್’ ಮಾದರಿಯನ್ನು ಮತ್ತೆ ಅನುಸರಿಸುವಂತೆ ಪ್ರಧಾನಿಯವರು ಸಲಹೆ ನೀಡಿದರು. ಸಂಘರ್ಷದ ಈ ಸಮಯದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ ಮೋದಿ, ಜನಸಾಮಾನ್ಯರು ಸಹ ಸರ್ಕಾರದೊಂದಿಗೆ ಕೈಜೋಡಿಸಿ ಆರ್ಥಿಕ ಶಿಸ್ತು ಕಾಪಾಡಬೇಕು ಎಂದು ಕರೆ ನೀಡಿದರು.

WhatsApp Group Join Now

Spread the love

Leave a Reply