ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.
ತಾಯಿ ಜೊತೆ ದೇವರ ದರ್ಶನಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ತಾಯಿ ಮುಂದೆ ಮಗನ ಎತ್ತಿಕೊಂಡು ಹೋದ ಚಿರತೆ ಕೊಂದು ಹಾಕಿದೆ. ಸುರೇಶ್ ಹಾಗೂ ಪವಿತ್ರ ದಂಪತಿಯ ಪುತ್ರ ಹರ್ಷಿತ್ ಗೌಡ ದುರಂತ ಅಂತ್ಯ ಕಂಡ ಬಾಲಕನ. ಇದೀಗ ಬಾಲಕನ ಮೃತದೇಹ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸ ತಲುಪಿದೆ.
ಇಂದು ಬೆಳಗ್ಗೆ 7.30 ಸುಮಾರಿಗೆ ಚಿರತೆ ದಾಳಿ ನಡೆಸಿದೆ. ಘಟನೆ ಕುರಿತು ಮೃತ ಬಾಲಕನ ತಂದೆ ಸುರೇಶ್ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವರ ದರ್ಶನಕ್ಕೆ ಹೋಗಿದ್ದ ಮಗ ಶವವಾಗಿ ಬಂದಿದ್ದಾನೆ. ನನ್ನ ಮಗನ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ತಂದೆ ಸುರೇಶ್ ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಹೀಗಾಗಿದೆ. ನಾನು ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಿಚಾರಿಸುವವರೆಗೂ ನಮ್ಮ ಮನೆಯವರಿಗೆ ಮಾಹಿತಿ ನೀಡಿಲ್ಲ. ನಾನು ಮಧ್ಯಾಹ್ನ 2.30ಕ್ಕೆ ಹೋಗಿ ವಿಚಾರಿಸಿದಾಗ ಮೃತದೇಹ ತಂದು ಕೊಟ್ಟರು. ಇನ್ನು ಮುಂದೆಯಾದ್ರೂ ಅರಣ್ಯ ಇಲಾಖೆಯವರು ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲಿ ಎಂದು ಸುರೇಶ್ ಮನವಿ ಮಾಡಿದ್ದಾರೆ.
ನನ್ನ ಕಣ್ಣ ಮುಂದೆಯೇ ನನ್ನ ಮಗುವನ್ನು ಚಿರತೆ ಎತ್ತಿಕೊಂಡು ಹೊಯ್ತು. ನಾವು ಬೆದರಿಸಿದ್ರು ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ. ನನ್ನ ಮಗ ನನ್ನ ಕಣ್ಮುಂದೆಯೇ ಸತ್ತು ಹೋಗಿದ್ದಾನೆ ಎಂದು ಹರ್ಷಿತ್ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.
ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸರಿಯಾದ ಭದ್ರತೆ ಕೈಗೊಂಡಿಲ್ಲ. ಹುಲಿ, ಚಿರತೆ ಇದೆ ಅಂತ ಒಂದು ಎಚ್ಚರಿಕೆ ಬೋರ್ಡ್ ಕೂಡ ಹಾಕಿಲ್ಲ. ನಮಗೆ ಮೊದಲೇ ಗೊತ್ತಿದ್ರೆ ಅಲ್ಲಿ ಹೋಗ್ತಾನೆ ಇರಲಿಲ್ಲ ಎಂದು ಮೃತ ಬಾಲಕನ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.
ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ
WhatsApp Group
Join Now