ತಮಿಳುನಾಡಿನಲ್ಲಿ ಸರ್ಕಾರ ರಚನೆಯ ರಾಜಕೀಯ ಹೋರಾಟ ಈಗ ವಾಟ್ಸಾಪ್ ರಾಜಕೀಯದತ್ತ ತಿರುಗಿದೆ. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ, ಸರ್ಕಾರ ರಚಿಸಲು ಅಗತ್ಯವಿರುವ ಬೆಂಬಲಕ್ಕಾಗಿ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳನ್ನು ನೇರ ಸಭೆಗಳಿಗೆ ಕರೆಯುವುದಕ್ಕಿಂತ ವಾಟ್ಸಾಪ್ ಸಂದೇಶಗಳ ಮೂಲಕ ಸಂಪರ್ಕಿಸಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇದೀಗ ಸರ್ಕಾರ ರಚನೆಗೂ ವಾಟ್ಸಾಪ್ ಸಾಕೇ? ಇದಕ್ಕೆ ಎಡಪಂಥೀಯ ನಾಯಕರು ಅಸಮಾಧಾನ ವ್ಯಕ್ತ ಪಡಿಸಿರುವಾದದರೂ ಏಕೆ ಎನ್ನುವುದನ್ನು ನೋಡೋಣ ಬನ್ನಿ.
ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ!
2026ರ ವಿಧಾನಸಭೆ ಚುನಾವಣೆಯಲ್ಲಿ TVK 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಬೇಕಾದ 118 ಶಾಸಕರ ಬಹುಮತಕ್ಕೆ ಇನ್ನೂ 10 ಸ್ಥಾನಗಳ ಕೊರತೆ ಇದೆ. ಕಾಂಗ್ರೆಸ್ ಪಕ್ಷದ ಐದು ಶಾಸಕರು ವಿಜಯ್ ಅವರಿಗೆ ಬೆಂಬಲ ಘೋಷಿಸಿದ್ದರಿಂದ ಸಂಖ್ಯೆ 113ಕ್ಕೆ ಏರಿದೆ. ಆದರೂ ಬಹುಮತಕ್ಕೆ ಇನ್ನೂ ಐದು ಶಾಸಕರ ಅಗತ್ಯವಿದೆ. ಇದೇ ಕಾರಣಕ್ಕೆ ವಿಜಯ್ ಇತರ ಸಣ್ಣ ಪಕ್ಷಗಳ ಬೆಂಬಲ ಪಡೆಯಲು ಪ್ರಯತ್ನ ಆರಂಭಿಸಿದ್ದಾರೆ.
ವಿವಾದ ಹುಟ್ಟಿಸಿದ ಡಿಜಿಟಲ್ ರಾಜಕೀಯ!
ಆದರೆ ಇಲ್ಲಿ ದೊಡ್ಡ ವಿವಾದ ಹುಟ್ಟಿಸಿದ್ದು ಅವರ “ಡಿಜಿಟಲ್ ರಾಜಕೀಯ” ವಿಧಾನ. ಸಾಮಾನ್ಯವಾಗಿ ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆಗಳು ನೇರ ಸಭೆ, ರಾಜಕೀಯ ಗೌರವ ಮತ್ತು ಸೈದ್ಧಾಂತಿಕ ಚರ್ಚೆಗಳ ಮೂಲಕ ನಡೆಯುತ್ತವೆ. ಆದರೆ ಟಿವಿಕೆ ಕಡೆಯಿಂದ ಎಡಪಕ್ಷಗಳಿಗೆ ಕೇವಲ ವಾಟ್ಸಾಪ್ ಸಂದೇಶ ಕಳುಹಿಸಿ ಬೆಂಬಲ ಕೇಳಲಾಗಿದೆ ಎಂದು ವರದಿಯಾಗಿದೆ. ಇದರಿಂದ ಎಡಪಕ್ಷಗಳಲ್ಲಿ ಅಸಮಾಧಾನ ಉಂಟಾಗಿದೆ.
ವಿಜಯ್ ವಾಟ್ಸಾಪ್ ಮೆಸೇಜ್ಗೆ ಎಡರಂಗ ಅಸಮಾಧಾನ!
ಹಿರಿಯ ಎಡಪಂಥೀಯ ನಾಯಕರೊಬ್ಬರು, “ಸರ್ಕಾರ ರಚಿಸಲು ಬಯಸುವ ಪಕ್ಷ ನಮ್ಮ ಕಚೇರಿಗೆ ಬರುವ ಅಗತ್ಯವನ್ನೂ ಅನುಭವಿಸಿಲ್ಲ. ಕೇವಲ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಇದನ್ನು ನಾವು ಹೇಗೆ ಸ್ವೀಕರಿಸಬೇಕು?” ಎಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಅಂತಿಮ ನಿರ್ಧಾರ ಕೈಗೊಳ್ಳದ ಸಣ್ಣ ಪಕ್ಷಗಳು!
ಇದೇ ವೇಳೆ, ಕಾಂಗ್ರೆಸ್ ಪಕ್ಷವು ದಶಕಗಳ ಕಾಲ ಡಿಎಂಕೆ ಜೊತೆ ಹೊಂದಿದ್ದ ಸಂಬಂಧವನ್ನು ಬಿಟ್ಟು ಟಿವಿಕೆಗೆ ಬೆಂಬಲ ನೀಡಿರುವುದೂ ಎಡಪಕ್ಷಗಳಲ್ಲಿ ಆತಂಕ ಮೂಡಿಸಿದೆ. ಟಿವಿಕೆಗೆ ಡಿಜಿಟಲ್ ಸಂಪರ್ಕದ ಮೂಲಕ ತಮ್ಮ ಮೈತ್ರಿಯಲ್ಲೂ ಬಿರುಕು ಮೂಡಿಸಬಹುದು ಎಂಬ ಭಯ ಕೆಲವು ನಾಯಕರಲ್ಲಿ ಇದೆ. ಸಿಪಿಐ ಮತ್ತು ವಿಸಿಕೆ ಪಕ್ಷಗಳು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪಕ್ಷದ ಒಳ ಸಭೆಗಳ ನಂತರವೇ ತಮ್ಮ ನಿಲುವು ಪ್ರಕಟಿಸುವ ಸಾಧ್ಯತೆ ಇದೆ.
ಒಂದಾಗ್ತಾರಾ ಬದ್ಧವೈರಿಗಳು!
ಈ ರಾಜಕೀಯ ಗೊಂದಲದ ನಡುವೆ ಮತ್ತೊಂದು ಕುತೂಹಲಕಾರಿ ಚರ್ಚೆ ಕೂಡ ಆರಂಭವಾಗಿದೆ. ಟಿವಿಕೆಗೆ ಬಹುಮತ ಸಿಗದಿದ್ದರೆ, ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಗುಪ್ತ ಒಪ್ಪಂದವಾಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಹಲವು ರಾಜಕೀಯ ವಲಯಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ರೆಸೋರ್ಟ್ಗೆ ದೌಡಾಯಿಸಿದ ಎಐಡಿಎಂಕೆ ನಾಯಕರು!
ಇದಕ್ಕೂ ಮಧ್ಯೆ, ಎಐಎಡಿಎಂಕೆ ತನ್ನ ಶಾಸಕರನ್ನು ಪುದುಚೇರಿಯ ಐಷಾರಾಮಿ ರೆಸಾರ್ಟ್ಗೆ ಕರೆದೊಯ್ದಿದೆ ಎಂಬ ಮಾಹಿತಿ ಹೊರಬಂದಿದೆ. ಶಾಸಕರನ್ನು ಸೆಳೆಯುವ ರಾಜಕೀಯ ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಎಡಪ್ಪಾಡಿ ಕೆ. ಪಳನಿಸ್ವಾಮಿ ಶಾಸಕರ ಜೊತೆ ವಿಶೇಷ ಸಭೆ ನಡೆಸಿದ್ದಾರೆ.
ಟಿವಿಕೆ ವಾದವೇನು?
ರಾಜಭವನ ಕೂಡ ಈಗ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ರಾಜ್ಯಪಾಲರು ವಿಜಯ್ ಅವರಿಗೆ ಮೊದಲು ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ. ಟಿವಿಕೆ ಕಾನೂನು ಸಲಹೆಗಾರರು ಈ ವಿಚಾರವನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ಗೆ ತೆಗೆದುಕೊಂಡು ಹೋಗುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದ್ದಾರೆ. “ಅತಿದೊಡ್ಡ ಪಕ್ಷವಾಗಿರುವ ಕಾರಣ ಮೊದಲ ಅವಕಾಶ ನಮಗೆ ಸಿಗಬೇಕು” ಎಂಬುದು ಟಿವಿಕೆ ವಾದವಾಗಿದೆ.
ಎದುರಾಗುತ್ತಾ ರಾಷ್ಟ್ರಪತಿ ಆಳ್ವಿಕೆ!
ಇದೀಗ ಮೇ 10ರ ಗಡುವು ಸಮೀಪಿಸುತ್ತಿದೆ. 16ನೇ ತಮಿಳುನಾಡು ವಿಧಾನಸಭೆಯ ಅವಧಿ ಅದೇ ದಿನ ಅಂತ್ಯಗೊಳ್ಳಲಿದೆ. ಆ ವೇಳೆಗೆ ಯಾವುದೇ ಪಕ್ಷ ಸ್ಪಷ್ಟ ಬಹುಮತ ತೋರಿಸಲು ವಿಫಲವಾದರೆ, ರಾಷ್ಟ್ರಪತಿ ಆಳ್ವಿಕೆ ಅಥವಾ ಹೊಸ ಚುನಾವಣೆಗಳ ಸಾಧ್ಯತೆಯೂ ಎದುರಾಗಬಹುದು. ತಮಿಳುನಾಡು ರಾಜಕೀಯದಲ್ಲಿ ಈಗ ವಾಟ್ಸಾಪ್ ಸಂದೇಶವೇ ದೊಡ್ಡ ಚರ್ಚೆಯ ವಿಷಯವಾಗಿದೆ. ವಿಜಯ್ ಅವರ “ಡಿಜಿಟಲ್ ರಾಜಕೀಯ” ಯಶಸ್ವಿಯಾಗುತ್ತದೆಯೇ ಅಥವಾ ಹಳೆಯ ರಾಜಕೀಯ ಸಂಪ್ರದಾಯಗಳೇ ಗೆಲ್ಲುತ್ತವೆಯೇ ಎಂಬುದು ಮುಂದಿನ ಕೆಲ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.
ಒಂದೇ ಒಂದು ವಾಟ್ಸಾಪ್ ಮೆಸೇಜ್; ವಿಜಯ್ ನಡೆಗೆ ದಂಗಾದ ಎಡರಂಗ: ಉಲ್ಟಾ ಹೊಡೆಯುತ್ತಾ ರಾಜಕೀಯ ಲೆಕ್ಕಾಚಾರ?
WhatsApp Group
Join Now