ತಿರುವನಂತಪುರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೊಠಡಿಯಲ್ಲಿ ಕೂಡಿಹಾಕಿ, ಪ್ರಾಣ ಹೋಗುವಂತೆ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಕೇರಳದ ತಿರುವನಂತಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಯುವತಿ ಸೇರಿದಂತೆ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರನ್ನು ಸುಜಿತ್ (32), ಅಭಿಲಾಷ್ (39) ಮತ್ತು ಈತನ ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಸರಿತ (37) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ತಿರುವನಂತಪುರಂ ನಿವಾಸಿ ಶರತ್ (37) ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕೊಲೆ ಸ್ಕೆಚ್‌ಗೆ ಕಾರಣವೇನು?
ಬಂಧಿತ ಆರೋಪಿಗಳಾದ ಸುಜಿತ್ ಮತ್ತು ಅಭಿಲಾಷ್ ಸಣ್ಣಪುಟ್ಟ ಕ್ರಿಮಿನಲ್‌ಗಳಲ್ಲ, ಇವರಿಬ್ಬರು 2021ರಲ್ಲಿ ನಡೆದಿದ್ದ ಖ್ಯಾತ ‘ವೈಶಾಖ್ ಕೊಲೆ ಪ್ರಕರಣ’ದ ಮುಖ್ಯ ಆರೋಪಿಗಳಾಗಿದ್ದಾರೆ. ಇನ್ನು ಅಭಿಲಾಷ್‌ನ ಪತ್ನಿ ಇತ್ತೀಚೆಗೆ ಕಳವು ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದಳು. ತನ್ನ ಪತ್ನಿ ಜೈಲಿಗೆ ಹೋಗಲು ಈ ಶರತ್ ಎಂಬಾತನೇ ಕಾರಣ ಎಂದು ಅಭಿಲಾಷ್ ತೀವ್ರವಾಗಿ ನಂಬಿದ್ದ. ಇದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಶರತ್‌ನನ್ನು ಮುಗಿಸಲು ಈ ಮೂವರ ತಂಡ ಮಾಸ್ಟರ್ ಪ್ಲಾನ್ ಮಾಡಿತ್ತು.
ರೂಮ್ ಬಾಡಿಗೆಗೆ ಪಡೆದು ಅಟ್ಯಾಕ್!
ಯೋಜನೆಯಂತೆ ಆರೋಪಿಗಳು ಮೊದಲು ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಬಳಿಕ ಶರತ್‌ಗೆ ನಂಬಿಸಿ ಕರೆ ಮಾಡಿ ಅದೇ ರೂಮಿಗೆ ಬರುವಂತೆ ಹೇಳಿದ್ದಾರೆ. ಶರತ್ ರೂಮಿಗೆ ಬರುತ್ತಿದ್ದಂತೆ ಬಾಗಿಲು ಲಾಕ್ ಮಾಡಿ, ಮೂವರೂ ಸೇರಿ ಆತನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ.
ಸತ್ತಿದ್ದಾನೆ ಅಂದುಕೊಂಡು ಎಸ್ಕೇಪ್ ಆದ್ರು!
ಆರೋಪಿಗಳು ಎಷ್ಟರಮಟ್ಟಿಗೆ ರಾಕ್ಷಸರಂತೆ ಹಲ್ಲೆ ನಡೆಸಿದ್ದಾರೆ ಎಂದರೆ, ಶರತ್ ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಪ್ಪಾಗಿ ಭಾವಿಸಿದ ಅಕ್ರಮಿಗಳು, ತಕ್ಷಣ ರೂಮ್ ಲಾಕ್ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಟ್ವಿಸ್ಟ್ ಕೊಟ್ಟ ಶರತ್ ಪ್ರಜ್ಞೆ!
ಆದರೆ ಅದೃಷ್ಟವಶಾತ್ ಶರತ್ ಪ್ರಾಣ ಉಳಿದಿತ್ತು. ದೀರ್ಘ ಸಮಯದ ಬಳಿಕ ಕೊಠಡಿಯೊಳಗೆ ಶರತ್‌ಗೆ ಪ್ರಜ್ಞೆ ಬಂದಿದೆ. ತಕ್ಷಣ ಆತ ಹೇಗೋ ಮಾಡಿ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಶರತ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬೆನ್ನತ್ತಿದ ಪೊಲೀಸರು ತೀವ್ರ ಜಾಲ ಬೀಸಿ, ಕೊಲೆಗೆ ಯತ್ನಿಸಿದ ಯುವತಿ ಸರಿತ ಹಾಗೂ ಇಬ್ಬರು ಹಳೇ ಕೊಲೆ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.