‘ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ..’ ಕೇಂದ್ರ ಸಚಿವ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಸವಾಲು!

Spread the love

ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ(HD Kumaraswamy) ಅವರ ಬಳಿ 85 ವಾಚುಗಳು, 700-800 ಎಕರೆ ಜಮೀನಿದೆ. ಅವರ ವಾಚ್‌ಗಳ ಒಟ್ಟು ಮೌಲ್ಯವೇ 10 ರಿಂದ 20 ಕೋಟಿ ರು. ಆಗುತ್ತದೆ. ಇಷ್ಟು ಆಸ್ತಿಯನ್ನು ಅವರು ಬದನೆಕಾಯಿ ಮಾರಿ ಗಳಿಸಿದರೇ’ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಪ್ರಶ್ನೆ ಮಾಡಿದ್ದಾರೆ.

ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪರಿಶ್ರಮ ನೀಟ್‌ ಅಕಾಡೆಮಿ(Perseverance NEET Academy)ಗೆ ಸಿಎ ಸೈಟ್‌ ಮಂಜೂರಾಗಿರುವ ಕುರಿತ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಮಾತನಾಡಿದ ಅವರು, ‘ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ’ ಎಂದು ಸವಾಲು ಹಾಕಿದ್ದಾರೆ.

ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿ(Anita Kumaraswamy) ಅವರು 32 ಎಕರೆ ಜಮೀನನ್ನು ರಾಮ್‌ರಾಜ್‌ ಪಂಚೆ ಮಾರಿ ಖರೀದಿಸಿದ್ದಾರೆಯೇ? ಎಂದು ಕಿಡಿಕಾರಿದ್ದಾರೆ.

ನಾನು ನಿಮ್ಮಂತೆ ಕಿಕ್‌ಬ್ಯಾಕ್‌, ಪರ್ಸೆಂಟೇಜ್‌ ತೆಗೆದುಕೊಂಡು ಹಣ ಮಾಡಿಲ್ಲ. ನನ್ನ ಸಂಸ್ಥೆಯ ಸಂಪಾದನೆಗೆ ತೆರಿಗೆ ಕಟ್ಟಿದ್ದೇನೆ.

ಪರಿಶ್ರಮ ನೀಟ್ ಅಕಾಡೆಮಿಗೆ ಸಿಎ ನಿವೇಶನ ನೀಡಿರುವ ವಿಚಾರವಾಗಿ ಹೈಕೋರ್ಟ್‌ ನನಗೆ ಚಾಟಿ ಬೀಸಿಲ್ಲ, ವಿವರಣೆ ಅಷ್ಟೇ ಕೇಳಿದೆ. ಹೈಕೋರ್ಟ್‌ಗೆ ಮಾಹಿತಿ ಕೊಡುತ್ತೇನೆ, ಕೇಸ್ ಗೆಲ್ಲುತ್ತೇನೆ. ಕುಮಾರಸ್ವಾಮಿ ಯಾರನ್ನೂ ಸಹಿಸಲ್ಲ, ಒಕ್ಕಲಿಗ ನಾಯಕರನ್ನು ಬೆಳೆಸಲ್ಲ. ಇದೀಗ ಬಡವರ ಮಕ್ಕಳು, ಒಬಿಸಿ ಮಕ್ಕಳು ಬೆಳೆಯಲೂ ಬಿಡುತ್ತಿಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಪಂಚೆ ಒಂದೇ ಸಿಂಪಲ್ :

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ 62 ವಾಚ್ ಕಟ್ಟಿದ್ದಾರೆ. 62 ವಾಚ್‌ಗಳ ಪೈಕಿ ಒಂದು ವಾಚ್ ಕನಿಷ್ಠ ಬೆಲೆ 10 ಲಕ್ಷ. ಈ ಪೈಕಿ 75-85 ಲಕ್ಷ ರು. ಆಗಿರಬಹುದು. ಅವರ ಬಳಿ ಇರುವ ವಾಚ್‌ಗಳ ಒಟ್ಟು ಮೌಲ್ಯ 15- 20 ಕೋಟಿ ಆಗುತ್ತದೆ. ಕುಮಾರಸ್ವಾಮಿ ಪಂಚೆ ಒಂದೇ ಸಿಂಪಲ್, ಉಳಿದದ್ದೆಲ್ಲಾ ದುಬಾರಿ ಎಂದು ಪ್ರದೀಪ್ ಈಶ್ವರ್‌ ಹೇಳಿದರು.

ನಾವು ಹಿಂದುಳಿದ ವರ್ಗದವರು ತುಳಿಸಿಕೊಳ್ಳುವುದಕ್ಕೆ ಅರ್ಹರು ಎಂದು ಅಂದುಕೊಳ್ಳೋಣ. ಆದರೆ ಒಕ್ಕಲಿಗರು ಬೆಳೆಯುತ್ತಿದ್ದರೆ ಏಕೆ ತುಳಿಯುತ್ತೀರಾ? ಪ್ರಧಾನಿ ಮಗ ಮುಖ್ಯಮಂತ್ರಿ ಆಗಬಹುದು, ಮೊಮ್ಮಗ ಸಂಸದ ಆಗಬಹುದು. ಆದರೆ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಬಾರದೇ ಎಂದು ಪ್ರಶ್ನಿಸಿದರು.

ಮಗನನನ್ನು ಮೂರು ಸಲ ನಿಲ್ಲಿಸಿದರೂ ಗೆಲ್ಲಿಸಲು ಆಗಿಲ್ಲ. ಆದರೆ ಅನಾಥ ಹುಡುನನನ್ನು ಕಾಂಗ್ರೆಸ್ ಗೆಲ್ಲಿಸಿದೆ. ಇದು ನಮ್ಮ ಪಕ್ಷದ ತಾಕತ್ತು, ನಾನು ರೈತನ ಮಗ. ಪರಿಶ್ರಮ ಅಕಾಡೆಮಿ ಮೂಲಕ ಪ್ರತಿ ವರ್ಷ 40 ಲಕ್ಷ ರು. ತೆರಿಗೆ ಕಟ್ಟಿದ್ದೇನೆ. ನಾನು ನಿಯಮಬಾಹಿರವಾಗಿ ಯಾವುದನ್ನೂ ಮಾಡಿಲ್ಲ. ನಾನು ಬಳ್ಳಾರಿ ಗಣಿ ಅಕ್ರಮ ಹಣದಿಂದ ಆಸ್ತಿ ಮಾಡಿಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

WhatsApp Group Join Now

Spread the love

Leave a Reply