ಕಾಂಗ್ರೆಸ್ ಮುನ್ನಡೆಸಲು ಸಿದ್ದನಿದ್ದೆ, ಆದರೆ ಪಿತೂರಿ ಮಾಡಿ ನನಗೆ ಹುದ್ದೆ ಸಿಗದಂತೆ ಮಾಡಿದರು: ಅಶೋಕ್ ಗೆಹ್ಲೋಟ್

Spread the love

ಕಳೆದ ಬಾರಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲು ಸಿದ್ದನಿದ್ದೆ, ನಮ್ಮ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು, ಆದರೆ ಕೊನೆಗಳಿಗೆಯಲ್ಲಿ ಪಿತೂರಿ ಮಾಡಿ ನನಗೆ ಹುದ್ದೆ ಸಿಗದಂತೆ ಮಾಡಲಾಯಿತು ಎಂದು ಭಾನುವಾರ(ಜೂ. 07) ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಈ ಕುರಿತು ಜೈಪುರದಲ್ಲಿ ಮಾತನಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದು, ನಾಯಕತ್ವವು ನನ್ನನ್ನು ಅಭ್ಯರ್ಥಿಯನ್ನಾಗಿ ನಿರ್ಧರಿಸಿತ್ತು. ನಾನು ಆ ಹುದ್ದೆಯನ್ನು ಗೌರವದ ಸಂಕೇತವೆಂದು ಸ್ವೀಕರಿಸಲು ನಿರ್ಧರಿಸಿದ್ದೆ, ಆದರೆ ಪಿತೂರಿಯೊಂದು ನನ್ನನ್ನು ತಡೆಯಿತು ಎಂದಿದ್ದಾರೆ.

ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ಪಕ್ಷದ ಮುಖ್ಯಸ್ಥರಾಗಲು ಕೇಳಿಕೊಂಡಿದ್ದರು. ಆದಾಗ್ಯೂ, ರಾಜಕೀಯ ಪರಿಸ್ಥಿತಿಯನ್ನು ನಿರ್ಣಯಿಸಲು ಪಕ್ಷದ ವೀಕ್ಷಕರನ್ನು ರಾಜಸ್ಥಾನಕ್ಕೆ ಕಳುಹಿಸಿದ ಬಳಿಕ ಘಟನೆಗಳು ನಾಟಕೀಯ ತಿರುವು ಪಡೆದುಕೊಂಡಿತು ಎಂದಿದ್ದಾರೆ.

ವೀಕ್ಷಕರು ರಾಜಸ್ಥಾನಕ್ಕೆ ಬಂದ ಬಳಿಕ ದೊಡ್ಡ ಪಿತೂರಿ ನಡೆಯಿತು. ಹಾಗಾಗಿ ನಾನು ಕಾಂಗ್ರೆಸ್ನ ಉನ್ನತ ಹುದ್ದೆ ಏರುವ ಯೋಜನೆ ಕೈತಪ್ಪಿತು. ರಾಜಸ್ಥಾನದ ಸಿಎಂ ಹುದ್ದೆ ತೊರೆಯಲು ಬಯಸದ ಕಾರಣ ಸ್ವಯಂಪ್ರೇರಣೆಯಿಂದ ಅಧ್ಯಕ್ಷ ಪದವಿಯಿಂದ ಹಿಂದೆ ಸರಿದರು ಎಂದು ಹೇಳಲಾಯಿತು. ಅದು ತಪ್ಪಾದ ನಿರೂಪಣೆ, ನಾನು ಹಿಂದೆ ಸರಿಯಲಿಲ್ಲ ಎಂದು ತಿಳಿಸಿದ್ದಾರೆ.

ಬದಲಾಗಿ ನಿಯಂತ್ರಣಕ್ಕೆ ಮೀರಿದ ಸಂದರ್ಭಗಳು ಮತ್ತು ಉದ್ದೇಶಪೂರ್ವಕ ಪಿತೂರಿ ನನ್ನನ್ನು ಆ ಸ್ಥಾನವನ್ನು ವಹಿಸಿಕೊಳ್ಳದಂತೆ ತಡೆಯಿತು. ಪಕ್ಷದ ಅಧ್ಯಕ್ಷತೆಗಿಂತ ರಾಜಸ್ಥಾನದಲ್ಲಿ ತಮ್ಮ ಪಾತ್ರಕ್ಕೆ ಆದ್ಯತೆ ನೀಡಲು ಅವರು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳಿದ್ರು, ಮತ್ತು ಆ ಘಟನೆ ನನ್ನ ಇಮೇಜ್ಗೆ ಧಕ್ಕೆ ಮಾಡಿತು ಎಂದಿದ್ದಾರೆ.

ಕಳೆದ ಬಾರಿಯ ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಮೊದಲಿಗೆ ಹೈಕಮಾಂಡ್ ಗೆಹ್ಲೋಟ್ ಅವರನ್ನೇ ನಿಲ್ಲುವಂತೆ ಕೇಳಿತ್ತು. ಮತ್ತು ದೇಶಾದ್ಯಂತ ಪ್ರವಾಸ ಮಾಡುವ ಸಲುವಾಗಿ ಸಿಎಂ ಸ್ಥಾನವನ್ನು ಸಚಿನ್ ಪೈಲಟ್ಗೆ ಬಿಟ್ಟುಕೊಡುವಂತೆ ಹೇಳಿತ್ತು ಎನ್ನಲಾಗಿದೆ. ಆದರೆ ಗೆಹ್ಲೋಟ್ ಸಿಎಂ ಸ್ಥಾನ ಬಿಡಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಕೊನೆಗಳಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚುನಾವಣೆಗೆ ನಿಲ್ಲಿಸಿತು. ಪ್ರತಿಸ್ಪರ್ಧಿಯಾಗಿ ಶಶಿ ತರೂರ್ ಸ್ಪರ್ಧೆ ಮಾಡಿದ್ದರು. ಖರ್ಗೆಯವರು ಗೆಲುವು ಸಾಧಿಸಿದ್ದರು.

WhatsApp Group Join Now

Spread the love

Leave a Reply