ಭೀಕರ ಅಪಘಾತ… ಪತಿ ಸಾವು, 18ಕ್ಕೂ ಹೆಚ್ಚು ಮೂಳೆ ಮುರಿದು ಕೋಮಾಗೆ ಜಾರಿದ ಪತ್ನಿ!

Spread the love

ವೇಗವಾಗಿ ಬಂದ ಥಾರ್ ಎಸ್‌ಯುವಿ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ವಕೀಲರೊಬ್ಬರು ಮೃತಪಟ್ಟು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿರುವ ಘಟನೆ ಗ್ರೇಟರ್ ನೋಯ್ಡಾ ವೆಸ್ಟ್‌ನ ಇಟೇರಾ ಪ್ರದೇಶದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಚಿಪಿಯಾನಾ ನಿವಾಸಿ, ನೀರಜ್ (40) (ಸುಪ್ರೀಂ ಕೋರ್ಟ್ ವಕೀಲ) ಎಂದು ಗುರುತಿಸಲಾಗಿದೆ. ಪತ್ನಿ ನಿಶಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲಾ ಶಿಕ್ಷಕಿಯಾಗಿರುವ ನಿಶಿ ಅವರನ್ನು ಪತಿ ನೀರಜ್ ತಮ್ಮ ದ್ವಿಚಕ್ರ ವಾಹನದಲ್ಲಿ ಶಾಲೆಯಿಂದ ಕರೆದುಕೊಂಡು ಮನೆಗೆ ಮರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಥಾರ್ ವಾಹನ ನೇರವಾಗಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿಗಳು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ದಂಪತಿಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ನೀರಜ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕೋಮಾದಲ್ಲಿರುವ ಪತ್ನಿ:

ಅಪಘಾತದ ತೀವ್ರತೆಗೆ ಪತ್ನಿ ನಿಶಿ ಅವರ ದೇಹದ 18ಕ್ಕೂ ಹೆಚ್ಚು ಮೂಳೆಗಳು ಮುರಿದುಬಿದ್ದಿದ್ದು, ಗಂಭೀರ ಗಾಯಗಳಿಂದ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಪ್ರಸ್ತುತ ಆಕೆಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಾರು ಚಾಲಕ ಪರಾರಿ:

ಇನ್ನು ಘಟನೆ ಸಂಭವಿಸಿದ ಬೆನ್ನಲ್ಲೇ ಥಾರ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು ಪೊಲೀಸರು ಥಾರ್ ವಾಹನವನ್ನು ಜಪ್ತಿ ಮಾಡಿದ್ದಾರೆ, ಚಾಲಕನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ಸಂಬಂಧ ಬಿಸರಖ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

WhatsApp Group Join Now

Spread the love

Leave a Reply